ಲೈಂಗಿಕ ದೌರ್ಜನ್ಯ ಪ್ರಕರಣ: ತರುಣ್ ತೇಜಪಾಲ್ ವಿರುದ್ಧದ ವಿಚಾರಣೆ ರದ್ದುಗೊಳಿಸಲು ಸುಪ್ರೀಂ ನಕಾರ

Update: 2019-08-19 08:04 GMT

ಹೊಸದಿಲ್ಲಿ, ಆ.19: ತಮ್ಮ ಕಿರಿಯ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತಿರುವ ‘ತೆಹಲ್ಕಾ’ ಸಂಪಾದಕ ತರುಣ್ ತೇಜಪಾಲ್ ಅವರ  ವಿರುದ್ಧದ ವಿಚಾರಣೆ  ರದ್ದುಪಡಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ತೇಜ್ ಪಾಲ್ ವಿರುದ್ಧದ ಆರೋಪ ಗಂಭೀರವಾಗಿದೆ ಹಾಗೂ ಸಂತ್ರಸ್ತೆಯ ಖಾಸಗಿತನದ ಮೇಲಿನ ಆಕ್ರಮಣವಾಗಿದೆ ಎಂದು ನ್ಯಾಯಾಲಯ ಬಣ್ಣಿಸಿದೆ.

ಗೋವಾದ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ನಡೆಯುತ್ತಿರುವ ವಿಚಾರಣೆಯನ್ನು ಬದಿಗೆ ಸರಿಸುವಂತೆ ಕೋರಿ ತರುಣ್ ತೇಜಪಾಲ್ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದರು. ಆದರೆ ಸುಪ್ರೀಂ ಕೋರ್ಟ್ ಅವರ ಕೋರಿಕೆಯನ್ನು ತಿರಸ್ಕರಿಸಿದ್ದೇ ಅಲ್ಲದೆ ವಿಚಾರಣೆ ಈಗಾಗಲೇ ವಿಳಂಬಗೊಂಡಿರುವುದರಿಂದ ಅದನ್ನು ಆರು ತಿಂಗಳೊಳಗೆ ಪೂರ್ತಿಗೊಳಿಸುವಂತೆಯೂ ಸೂಚಿಸಿದೆ.

‘ತೆಹಲ್ಕಾ’ ಸ್ಥಾಪಕ ಸಂಪಾದಕರಾಗಿರುವ ತರುಣ್ ತೇಜಪಾಲ್ ಗೋವಾದಲ್ಲಿ 2013ರಲ್ಲಿ ಕಾರ್ಯಕ್ರಮ ನಡೆದ ಸಂದರ್ಭ  ತಮ್ಮ ಕಿರಿಯ ಸಹೋದ್ಯೋಗಿಯ ಮೇಲೆ ಪಂಚತಾರ ಹೋಟೆಲ್ ಒಂದರ ಲಿಫ್ಟ್ ನಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂಬ ಆರೋಪವಿದೆ.

ಈ ಘಟನೆಯ ಬಗ್ಗೆ ಸಂತ್ರಸ್ತೆ  ತನ್ನ ಹಿರಿಯಾಧಿಕಾರಿಗಳಿಗೆ ಇಮೇಲ್ ಮೂಲಕ ದೂರಿದ್ದು ಬಹಿರಂಗಗೊಂಡ ನಂತರ ಈ ಪ್ರಕರಣ ಹೊರಬಿದ್ದಿತ್ತು. ಗೋವಾ ತ್ವರಿತಗತಿ ನ್ಯಾಯಾಲಯದಲ್ಲಿ  ಸಲ್ಲಿಸಲಾಗಿರುವ 2,684 ಪುಟಗಳ ಚಾರ್ಜ್ ಶೀಟ್ ನಲ್ಲಿ  ಉಲ್ಲೇಖಗೊಂಡಂತೆ ತೇಜಪಾಲ್ ಸಂತ್ರಸ್ತೆಯ ಮೇಲೆ ಮೂರು ಬಾರಿ ದೌರ್ಜನ್ಯವೆಸಗಿದ್ದಾರೆಂದು ಹೇಳಲಾಗಿದೆ.

ಆದರೆ ಈ ಆರೋಪಗಳು ಸುಳ್ಳು, ಗೋವಾದ ಬಿಜೆಪಿ ಸರಕಾರದ ರಾಜಕೀಯ ದ್ವೇಷದ ಕ್ರಮದ ಭಾಗ ಇದಾಗಿದೆಯೆಂದು ತೇಜಪಾಲ್  ವಾದಿಸಿದ್ದರು. ಅವರ ಮನವಿಯನ್ನು ಬಾಂಬೆ ಹೈಕೋರ್ಟ್ 2017ರಲ್ಲಿ ತಿರಸ್ಕರಿಸಿದ ನಂತರ  ಅವರು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News