ಆರ್ಥಿಕತೆ ಕುಂಠಿತ ಚಿಂತೆಯ ವಿಷಯ: ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್

Update: 2019-08-19 14:39 GMT

ಹೊಸದಿಲ್ಲಿ, ಆ.19: ಸದ್ಯ ದೇಶದ ಆರ್ಥಿತೆ ಕುಂಠಿತಗೊಂಡಿರುವುದು ಚಿಂತೆಯ ವಿಷಯವಾಗಿದೆ ಮತ್ತು ಸರಕಾರ, ಇಂಧನ ಮತ್ತು ಬ್ಯಾಂಕೇತರ ವಾಣಿಜ್ಯ ವಲಯಗಳ ಸಮಸ್ಯೆಗಳನ್ನು ಬಗೆಹರಿಸಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಖಾಸಗಿ ವಲಯಕ್ಕೆ ಜೀವತುಂಬಲು ನೂತನ ಸುಧಾರಣಾ ನೀತಿಗಳನ್ನು ರಚಿಸಬೇಕು ಎಂದು ಆರ್‌ಬಿಐಯ ಮಾಜಿ ಗವರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ.

2013ರಿಂದ 2016ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ರಘುರಾಮ ರಾಜನ್ ಅವರು, ಆರ್ಥಿಕತೆ ಬೆಳವಣಿಗೆ ದರದ ಕುರಿತು ನರೇಂದ್ರ ಮೋದಿ ಸರಕಾರದ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಅರವಿಂದ್ ಸುಬ್ರಮಣ್ಯನ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ ಮತ್ತು ಭಾರತದಲ್ಲಿ ಜಿಡಿಪಿಯನ್ನು ಲೆಕ್ಕಹಾಕುವ ರೀತಿಯಲ್ಲಿ ಹೊಸ ದೃಷ್ಟಿಕೋನ ಅಳವಡಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

2018-19ರಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.6.8ಕ್ಕೆ ಕುಸಿದಿದೆ. ಪ್ರಸಕ್ತ ವರ್ಷದಲ್ಲಿ ಪ್ರಗತಿದರ ಸರಕಾರ ಅಂದಾಜಿಸಿರುವ ಶೇ.7ಕ್ಕಿಂತ ಕಡಿಮೆಯಿರಲಿದೆ ಎಂದು ಅನೇಕ ಖಾಸಗಿ ತಜ್ಞರ ಮತ್ತು ಕೇಂದ್ರ ಬ್ಯಾಂಕ್‌ನ ಅಂದಾಜು ತಿಳಿಸಿದೆ. ಇದು ನಿಜವಾಗಿಯೂ ಚಿಂತೆಯ ವಿಷಯ ಎಂದು ರಾಜನ್ ಎಚ್ಚರಿಸಿದ್ದಾರೆ.

ಭಾರತ ಏನಾಗಬೇಕು ಎಂಬ ದೃಷ್ಟಿಕೋನದಿಂದ ಹೊಸ ಸುಧಾರಣೆಗಳನ್ನು ರಚಿಸುವ ಅಗತ್ಯವಿದೆ. ಅಲ್ಲೊಂದು ಇಲ್ಲೊಂದು ಯೋಜನೆಗಳನ್ನು ರೂಪಿಸುವುದರಿಂದ ಆರ್ಥಿಕತೆಯಲ್ಲಿ ಸಮಗ್ರ ಸುಧಾರಣೆ ತರಲು ಸಾಧ್ಯವಿಲ್ಲ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಲ ಪಡೆಯುವುದು ಸುಧಾರಣೆಯಲ್ಲ, ಅದು ವ್ಯೂಹಾತ್ಮಕ ಕ್ರಮ ಎಂದು ರಾಜನ್ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News