ದೇವಸ್ಥಾನ ನೆಲಸಮ ಆದೇಶಕ್ಕೆ ರಾಜಕೀಯ ಬಣ್ಣ ಬೇಡ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಆ.19: ತನ್ನ ಆದೇಶಗಳನ್ನು ರಾಜಕೀಯಗೊಳಿಸುವ ಪ್ರಯತ್ನಗಳನ್ನು ಸೋಮವಾರ ಕಟುವಾಗಿ ಟೀಕಿಸಿದ ಸರ್ವೋಚ್ಚ ನ್ಯಾಯಾಲಯವು,ಪ್ರತಿಯೊಬ್ಬರೂ ಇಂತಹ ಪ್ರಯತ್ನಗಳಿಂದ ದೂರವಿರಬೇಕು ಎಂದು ಹೇಳಿತು. ಈ ಭೂಮಿಯಲ್ಲಿರುವ ಯಾರೂ ನಮ್ಮ ಆದೇಶಗಳಿಗೆ ರಾಜಕೀಯ ಬಣ್ಣ ನೀಡಬಾರದು. ಹಾಗೆ ಮಾಡುವಂತಿಲ್ಲ ಎಂದು ನ್ಯಾ.ಅರುಣ್ ಮಿಶ್ರಾ ನೇತೃತ್ವದ ಪೀಠವು ತಿಳಿಸಿತು.
ದಿಲ್ಲಿಯ ತುಘ್ಲಕಾಬಾದ್ ಪ್ರದೇಶದಲ್ಲಿಯ ಗುರು ರವಿದಾಸ ಮಂದಿರ ನೆಲಸಮಕ್ಕೆ ಸಂಬಂಧಿಸಿದ ವಿಷಯದ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು. ಮಂದಿರವನ್ನು ಅತಿಕ್ರಮಣ ಜಾಗದಲ್ಲಿ ನಿರ್ಮಿಸಲಾಗಿದೆ ಎಂಬ ದಿಲ್ಲಿ ಉಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು ಅದನ್ನು ನೆಲಸಮಗೊಳಿಸುವಂತೆ ಆದೇಶಿಸಿತ್ತು ಮತ್ತು ಆ.10ರಂದು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರವು ಪೊಲೀಸರ ಬೆಂಬಲದೊಂದಿಗೆ ನ್ಯಾಯಾಲಯದ ಆದೇಶವನ್ನು ಕಾರ್ಯಗತಗೊಳಿಸಿತ್ತು. ಇದನ್ನು ಪ್ರತಿಭಟಿಸಿ ಕಳೆದ ಮಂಗಳವಾರ ಪಂಜಾಬಿನಲ್ಲಿ ದಲಿತ ಗುಂಪುಗಳು ಸಂಪೂರ್ಣ ರಾಜ್ಯ ಬಂದ್ ಅನ್ನು ಆಚರಿಸಿದ್ದವು. ದಿಲ್ಲಿಯ ಹಲವೆಡೆಗಳಲ್ಲಿಯೂ ದಲಿತ ಸಂಘಟನೆಗಳಿಂದ ಪ್ರತಿಭಟನಾ ಜಾಥಾಗಳು ನಡೆದಿದ್ದವು. ಇದನ್ನು ಸರ್ವೋಚ್ಚ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿತ್ತು.
ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆ. ಆದರೆ ದಿಲ್ಲಿ,ಪಂಜಾಬ ಮತ್ತು ಹರ್ಯಾಣಗಳಲ್ಲಿ ಈಗಲೂ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಅವರು ವಿಚಾರಣೆ ವೇಳೆ ತಿಳಿಸಿದಾಗ,ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ಪೀಠವು ಈ ಮೂರು ರಾಜ್ಯಗಳ ಉನ್ನತ ಅಧಿಕಾರಿಗಳಿಗೆ ನಿರ್ದೇಶ ನೀಡಿತು. ಸರ್ವೋಚ್ಚ ನ್ಯಾಯಾಲಯದ ಆದೇಶಗಳಿಗೆ ರಾಜಕೀಯ ಬಣ್ಣ ನೀಡುವಂತಿಲ್ಲ ಎಂದೂ ಅದು ಹೇಳಿತು.