ರಾಜಕೀಯ ಯಶಸ್ಸಿನೆದುರು ಚರ್ಚೆಯಾಗದ ಆರ್ಥಿಕ ಘೋರ ವೈಫಲ್ಯ

Update: 2019-08-19 15:37 GMT

ಕಳೆದ ನಾಲ್ಕು ವರ್ಷಗಳಲ್ಲಿ ( 2014-2018) ಭಾರತದ ರಫ್ತು ಸರಾಸರಿ ಬೆಳವಣಿಗೆ ಎಷ್ಟಿರಬಹುದು? 0.2%. 2010ರಿಂದ 2014 ರವರೆಗೆ ಜಾಗತಿಕವಾಗಿ ರಫ್ತು ಪ್ರಮಾಣ 5.5 % ಏರಿಕೆ ಕಾಣುತ್ತಿದ್ದರೆ, ಆಗ ಭಾರತದ ರಫ್ತು 9.2% ಪ್ರತಿವರ್ಷ ಏರಿಕೆಯಾಗುತ್ತಿತ್ತು. ಅಲ್ಲಿಂದ ಕುಸಿದು ಈಗ 0.2% ಬೆಳವಣಿಗೆ ದರಕ್ಕೆ ಬಂದು ನಿಂತಿದ್ದೇವೆ.

ಇದು ನನ್ನ ವಿಶ್ಲೇಷಣೆ ಅಲ್ಲ. 'ಫೈನಾನ್ಶಿಯಲ್ ಎಕ್ಸ್ ಪ್ರೆಸ್' ಸಂಪಾದಕ ಸುನಿಲ್ ಜೈನ್ ಅವರದ್ದು. ಅವರ ಪ್ರಕಾರ ಚೀನಾ 2014-2018ರ ನಡುವೆ ಪ್ರತಿವರ್ಷ 1.5% ಪ್ರಮಾಣದಲ್ಲಿ ರಫ್ತಿನಲ್ಲಿ ಏರಿಕೆ ದಾಖಲಿಸುತ್ತಾ ಹೋಗಿದೆ. ಇದರ ಲಾಭ ಎತ್ತಿದ ವಿಯೆಟ್ನಾಂ ಈ ಕ್ಷೇತ್ರದಲ್ಲಿ ವೇಗವಾಗಿ ತನ್ನ ಛಾಪು ಮೂಡಿಸುತ್ತಾ ಬಂದಿದೆ. ಅದರ ರಫ್ತು ಪ್ರತಿವರ್ಷ 13% ಪ್ರಮಾಣದಲ್ಲಿ ಹೆಚ್ಚುತ್ತಾ ಹೋಗಿದೆ. 1990ರಲ್ಲಿ ಭಾರತದ ಶೇ.13ರಷ್ಟು ಮಾತ್ರ ವಿಯೆಟ್ನಾಂ ರಫ್ತ್ತು ಮಾಡುತ್ತಿತ್ತು. ಆದರೆ ಇವತ್ತು ಅದು 75%ಕ್ಕೆ ಏರಿದೆ. ಭಾರತಕ್ಕೆ ಹೋಲಿಸಿದರೆ ವಿಯೆಟ್ನಾಂ ಅತ್ಯಂತ ಸಣ್ಣ ದೇಶ. ಸುನಿಲ್ ಜೈನ್ ಅವರ ಪ್ರಕಾರ ಬಹಳ ಬೇಗ ವಿಯೆಟ್ನಾಂ ರಫ್ತು ಕ್ಷೇತ್ರದಲ್ಲಿ  ಭಾರತವನ್ನು ಹಿಂದಿಕ್ಕಲಿದೆ.

ಚೀನಾ ಜವಳಿ ಕ್ಷೇತ್ರ ಬಿಟ್ಟು ಅಧಿಕ ಬೆಲೆಯ ಉತ್ಪನ್ನಗಳ  ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದಾಗ ಆ ಖಾಲಿಯಾದ ಜಾಗವನ್ನು ತುಂಬಲು ಬಾಂಗ್ಲಾದೇಶ ಹಾಗು ವಿಯೆಟ್ನಾಂ ತಕ್ಷಣ ಪ್ರಯತ್ನ ಶುರು ಮಾಡಿದವು. ನೀವು ಬಿಸಿನೆಸ್ ಸುದ್ದಿ ಓದುವವರಾದರೆ ನಿಮಗೆ ಗೊತ್ತಿರಬಹುದು. ಕೆಲವು ವರ್ಷಗಳ ಹಿಂದೆ ಮೋದಿ ಸರಕಾರ ಜವಳಿ ಕ್ಷೇತ್ರಕ್ಕೆ 6000 ಕೋಟಿ ರೂ. ಪ್ಯಾಕೇಜ್ ಘೋಷಿಸಿತು. ಆದರೆ ಭಾರತದ ಟೆಕ್ಸ್ ಟೈಲ್ ಕ್ಷೇತ್ರ ಈವರೆಗೂ ಜಾಗತಿಕವಾಗಿ ಬೆಳೆದು ನಿಂತಿಲ್ಲ. ಜವಳಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಲ್ಲಿ ಒಂದು. 2016ರ ಜೂನ್ ನಲ್ಲಿ ಮೋದಿ ಸಂಪುಟ ಈ ಕ್ಷೇತ್ರಕ್ಕೆ ಪ್ಯಾಕೇಜ್ ಘೋಷಣೆ ಮಾಡುವಾಗ ಮುಂದಿನ ಮೂರು ವರ್ಷಗಳಲ್ಲಿ, ಅಂದರೆ 2019ರೊಳಗೆ ಜವಳಿ ಕ್ಷೇತ್ರದಲ್ಲಿ 75,000 ಕೋಟಿ ಹೂಡಿಕೆ ಆಗಲಿದೆ ಹಾಗು ಒಂದು ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿತ್ತು. ಆದರೆ ನಿಜವಾಗಿ ಏನಾಗಿದೆ ಎಂದು ನೋಡಲು ಹೋದರೆ ನಿಮಗೆ ಭಾರೀ ನಿರಾಸೆ ಖಚಿತ.

‘ಫೈನಾನ್ಶಿಯಲ್ ಎಕ್ಸ್ ಪ್ರೆಸ್’ನ ಇನ್ನೊಂದು ಸುದ್ದಿ ಇದೆ. ಅದರ ಪ್ರಕಾರ ಎಪ್ರಿಲ್ - ಜೂನ್ ತ್ರೈಮಾಸಿಕದ ಫಲಿತಾಂಶಗಳ ಪ್ರಕಾರ ಮಾರುಕಟ್ಟೆಯಲ್ಲಿ ಬೇಡಿಕೆ ಕುಗ್ಗಿದೆ ಹಾಗು ಲಾಭ ಶೂನ್ಯವಾಗಿದೆ. 2,179 ಕಂಪೆನಿಗಳ ಲಾಭದಲ್ಲಿ 11.97 % ಕುಸಿತವಾಗಿದೆ. ಏಕೆಂದರೆ ಮಾರಾಟದಲ್ಲಿ ಆಗಿರುವುದು ಕೇವಲ 5.87% ಹೆಚ್ಚಳ. ಇದು ಅತಿ ಮಾಮೂಲಿ ಹೆಚ್ಚಳ. ಇದರ ಪರಿಣಾಮ ಜಾಹೀರಾತುಗಳ ಮೇಲೆ ಬೀಳುತ್ತದೆ. ಜಾಹೀರಾತು ಕಡಿಮೆಯಾಗುವಾಗ ಈಗ ಭ್ರಮೆ ಹರಡುತ್ತಿರುವ ಚಾನಲ್ ಗಳಲ್ಲಿ ಉದ್ಯೋಗ ಕಡಿತವಾಗುತ್ತದೆ. ಈಗಾಗಲೇ ಆ ಪರಿಸ್ಥಿತಿ ಬಂದಿರಬಹುದು.

ಅಂತರ್ ರಾಷ್ಟ್ರೀಯ ಒತ್ತಡಗಳಿಂದಾಗಿ ಚೀನಾದ ಮೊಬೈಲ್ ತಯಾರಿಕಾ ಕಂಪೆನಿಗಳು ಕಡಿಮೆ ರಿಸ್ಕ್ ಇರುವ ಕ್ಷೇತ್ರಗಳತ್ತ ಗಮನ ಹರಿಸುತ್ತಿವೆ. ಆ ಜಾಗಕ್ಕೆ ಬರಲು ವಿಯೆಟ್ನಾಂ ಈಗಾಗಲೇ ಸಜ್ಜಾಗಿ ಕುಳಿತಿದೆ. 2010ರಿಂದ ಭಾರತದ ಮೊಬೈಲ್ ರಫ್ತು ವೇಗವಾಗಿ ಕುಸಿಯುತ್ತಲೇ ಹೋದರೆ ವಿಯೆಟ್ನಾಂ ನ ಮೊಬೈಲ್ ರಫ್ತು 21 ಪಟ್ಟು ಹೆಚ್ಚಿದೆ. ಜಗತ್ತಿನ ಸ್ಮಾರ್ಟ್ ಫೋನ್ ವ್ಯಾಪಾರ ಒಟ್ಟು 300 ಬಿಲಿಯನ್ ಡಾಲರ್ ನಷ್ಟಿದೆ. ಇದರ 60% ಚೀನಾ ಕೈಯಲ್ಲಿದೆ. ಈ ಜಾಗತಿಕ ರಫ್ತಿನಲ್ಲಿ ವಿಯೆಟ್ನಾಂ ಪಾಲು 10% ಇದೆ. ಇದರಲ್ಲಿ ಭಾರತದ ಪಾಲು ನಗಣ್ಯ. 2010ರಲ್ಲಿ ಭಾರತಕ್ಕೆ ಹೋಲಿಸಿದರೆ ವಿಯೆಟ್ನಾಂ ಮಾಡುತ್ತಿದ್ದ ಮೊಬೈಲ್ ಉತ್ಪಾದನೆ ಕೇವಲ 4%. ಇವತ್ತು ವಿಯೆಟ್ನಾಂ ಎಲ್ಲಿಗೆ ತಲುಪಿದೆ?, ಭಾರತ ಎಲ್ಲಿದೆ ?. ಈಗ ಭಾರತದಲ್ಲಿ ಹೆಚ್ಚಿನ ಮೊಬೈಲ್ ಜೋಡಣೆ ಮಾತ್ರ ಆಗುತ್ತಿದೆ, ತಯಾರಿಕೆ ಆಗುತ್ತಿಲ್ಲ. ಮೊಬೈಲ್ ಬಿಡಿಭಾಗಗಳು ಆಮದಾಗಿ ಇಲ್ಲಿ ಅವುಗಳನ್ನು ಜೋಡಿಸಿ ಮೊಬೈಲ್ ತಯಾರಾಗುತ್ತದೆ. ಹಾಗಾಗಿ ಮೊಬೈಲ್ ಬಿಡಿ ಭಾಗಗಳ ಆಮದು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ವಿಯೆಟ್ನಾಂನಲ್ಲಿ ಕಾರ್ಪೊರೇಟ್ ತೆರಿಗೆ 10 ರಿಂದ 20% ಇದ್ದರೆ ಭಾರತದಲ್ಲಿ ಅದು 43. 68% ಇದೆ. 

ಮೋದಿ ಸರಕಾರ ಆರ್ಥಿಕ ರಂಗದಲ್ಲಿ ವಿಫಲ ಸರಕಾರ. ಇದು ಆ ಸರಕಾರದ ಆರನೇ ವರ್ಷ. ಆದರೆ ಯಾವುದೇ ಒಂದು ವಾಣಿಜ್ಯ ಕ್ಷೇತ್ರದಲ್ಲಿಯೂ ಅದು ತಾನು ಸಫಲನಾಗಿದ್ದೇನೆ ಎಂದು ತೋರಿಸುವ ಪರಿಸ್ಥಿತಿ ಇಲ್ಲ. ಜವಳಿ, ಮೊಬೈಲ್, ಅಟೋಮೊಬೈಲ್ ಎಲ್ಲವೂ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿವೆ. ಬ್ಯಾಂಕುಗಳು ಕಂಗಾಲಾಗಿವೆ. ನಿಸ್ಸಂಶಯವಾಗಿಯೂ ಮೋದಿ ಸರಕಾರ ರಾಜಕೀಯವಾಗಿ ಸಫಲ ಸರಕಾರ. ಆ ಯಶಸ್ಸಿನ ಮುಂದೆ ನಿರುದ್ಯೋಗದಂತಹ ಗಂಭೀರ ಸಮಸ್ಯೆಗಳೂ ಬೋಗಸ್ ಎಂಬಂತಾಗಿವೆ. ನೋಟು ರದ್ಧತಿಯಂತಹ ಬೋಗಸ್ ಹೆಜ್ಜೆ ಕೂಡ ಮೋದಿ ಸರಕಾರದ ರಾಜಕೀಯ ಯಶಸ್ಸಿನ ಮುಂದೆ ಸರಿ ಎಂಬಂತಾಗಿಬಿಟ್ಟಿದೆ. ಇದೇ ಕಾರಣದಿಂದಾಗಿ ಚುನಾವಣಾ ಸೋಲಿನ ಬಳಿಕ ವಿಪಕ್ಷ ನಾಯಕರೂ ತಮ್ಮ ಉದ್ಯೋಗಕ್ಕಾಗಿ ಬಿಜೆಪಿ ಸೇರುತ್ತಿದ್ದಾರೆ. ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಬೇಕಾದರೆ ಬಿಜೆಪಿಗೇ ಸೇರಬೇಕು, ಏಕೆಂದರೆ ಜನರು ಉದ್ಯೋಗ, ಪಿಂಚಣಿ, ತಮ್ಮ ಉಳಿತಾಯ ಇವೆಲ್ಲವನ್ನೂ ಕಳಕೊಂಡರೂ ಬಿಜೆಪಿಗೇ ಮತ ನೀಡುತ್ತಾರೆ ಎಂದು ವಿಪಕ್ಷ ನಾಯಕರಿಗೆ ಗೊತ್ತಾಗಿದೆ. ಇದ್ದ ಉದ್ಯೋಗ ಕಳಕೊಂಡು, ಹೊಸ ಉದ್ಯೋಗ ಸಿಗದೇ ಇದ್ದರೂ ಮೋದಿ ಸರಕಾರದ ಬಗ್ಗೆ ಒಂಚೂರು ಅಪಸ್ವರ ಎತ್ತದ ಜನರನ್ನು ನಾನು ಸ್ವತಃ ನೋಡಿದ್ದೇನೆ. ಇಂತಹ ಪ್ರಚಂಡ ರಾಜಕೀಯ ಯಶಸ್ಸು ಬಹಳ ಕಡಿಮೆ ರಾಜಕಾರಣಿಗಳಿಗೆ ಸಿಗುತ್ತದೆ. ಹಾಗಾಗಿ ಇವತ್ತು ನಿರುದ್ಯೋಗವೇ ಬೋಗಸ್ ವಿಷಯವಾಗಿಬಿಟ್ಟಿದೆ.

ಟಿಪ್ಪಣಿ - ಇಂತಹ ಸುದ್ದಿಗಳು ನಿಮಗೆ ಹಿಂದಿ ಪತ್ರಿಕೆಗಳಲ್ಲಿ ಸಿಗುತ್ತವೆಯೇ ?, ನೀವು ಯಾರಿಗೆ ಬೇಕಾದರೂ ಮತ ಹಾಕಿ. ಆದರೆ ಈ ಕೆಟ್ಟ ಹಿಂದಿ ಪತ್ರಿಕೆಗಳನ್ನು ಓದುವುದನ್ನು ಬಿಟ್ಟು ಬಿಡಿ. ಇವುಗಳಲ್ಲಿ ನಿಮ್ಮನ್ನು ಭವಿಷ್ಯಕ್ಕೆ ಕೊಂಡೊಯ್ಯುವ ವಿಷಯಗಳಿಲ್ಲ. ಇವುಗಳ ಸಂಪಾದಕರು ಈಗ ಪ್ರಭುತ್ವದ ‘ಜೀ ಹುಜೂರ್’ಗಳಾಗಿಬಿಟ್ಟಿದ್ದಾರೆ. ಈ ಪತ್ರಿಕೆಗಳಿಗೆ ಕೊಡುವ ದುಡ್ಡಿನಿಂದ ( ಮೊಬೈಲ್ ) ಡೇಟಾ ಖರೀದಿಸಿ ಮಜಾ ಮಾಡಿ. ಮಾಹಿತಿಗಾಗಿ ಆ ಕಡೆ ಈ ಕಡೆ ದೃಷ್ಟಿ ಹಾಯಿಸುತ್ತಿರಿ. ಅಷ್ಟಕ್ಕೂ ಈಗ ಸುದ್ದಿ ಕಡಿಮೆಯಾಗುತ್ತಾ ಹೋಗುತ್ತಿದೆ. ನಿಮಗೆ ಬೇರೆ ಆಯ್ಕೆಗಳೂ ಇಲ್ಲ. ಹಿಂದಿ ಪತ್ರಿಕೆಗಳು ಮತ್ತು ಚಾನಲ್ ಗಳನ್ನು ಗಮನಿಸಿ ನೋಡಿ. ಅವುಗಳ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಮುಗಿಸಲಾಗುತ್ತಿದೆ. ಈಗ ಅಲ್ಲದಿದ್ದರೂ ಹತ್ತು ವರ್ಷಗಳ ಬಳಿಕ ಈ ಲೇಖನವನ್ನು ಓದಿ ನೀವು ಅಳುತ್ತೀರಿ. ಹಾಗಾಗಿ ಇವತ್ತೇ ಹೆಲ್ಮೆಟ್ ಹಾಕಿಕೊಳ್ಳಿ.

Full View

Writer - ರವೀಶ್ ಕುಮಾರ್

contributor

Editor - ರವೀಶ್ ಕುಮಾರ್

contributor

Similar News