370ನೇ ವಿಧಿ ರದ್ದತಿಯ ಬಳಿಕ ಕಾಶ್ಮೀರದಲ್ಲಿ 4 ಸಾವಿರಕ್ಕೂ ಅಧಿಕ ಬಂಧನ, ಜೈಲುಗಳು ಭರ್ತಿ

Update: 2019-08-19 16:06 GMT

ಶ್ರೀನಗರ, ಆ.19: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಅಲ್ಲಿ ಹಿಂಸೆ ಸಂಭವಿಸಬಹುದು ಎಂಬ ಭಯದಿಂದ 4 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದ ಜೈಲುಗಳಲ್ಲಿ ಬಂಧಿತರನ್ನು ಇಡಲು ಸ್ಥಳವಿಲ್ಲದ ಕಾರಣ ಕೆಲವರನ್ನು ಹೊರರಾಜ್ಯಕ್ಕೆ ರವಾನಿಸಲಾಗಿದೆ ಎಂದು ಹೆಸರು ಬಹಿರಂಗಗೊಳಿಸಲು ಬಯಸದ ನ್ಯಾಯಾಧೀಶರೊಬ್ಬರು ಹೇಳಿದ್ದಾರೆ.

 ಕನಿಷ್ಟ 4 ಸಾವಿರ ಜನರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್‌ಎ)ಯಡಿ ಬಂಧಿಸಲಾಗಿದೆ ಎಂದವರು ಹೇಳಿದ್ದಾರೆ. ವ್ಯಕ್ತಿಯೊಬ್ಬನನ್ನು ಯಾವುದೇ ಆರೋಪ ಹೊರಿಸದೆ ಅಥವಾ ವಿಚಾರಣೆ ನಡೆಸದೆ ಎರಡು ವರ್ಷ ಬಂಧನದಲ್ಲಿಡಲು ಈ ವಿವಾದಾತ್ಮಕ ಕಾಯ್ದೆ ಅವಕಾಶ ನೀಡುತ್ತದೆ. ರಾಜ್ಯದಲ್ಲಿ ಸಂಪರ್ಕ ವ್ಯವಸ್ಥೆ ಸ್ಥಗಿತಗೊಳಿಸಿದ್ದರೂ ಈ ಹಿಂದೆ ತನಗೆ ನೀಡಲಾಗಿದ್ದ ಸ್ಯಾಟ್ ಲೈಟ್ ಫೋನ್‌ನಿಂದಾಗಿ ಸಹೋದ್ಯೋಗಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಸಾಧ್ಯವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

 ಭದ್ರತಾ ಪಡೆಗಳ ಅಶ್ರುವಾಯು ಪ್ರಯೋಗದಿಂದ ಉಸಿರುಗಟ್ಟಿ 62 ವರ್ಷದ ಕಟ್ಟಿಗೆ ವ್ಯಾಪಾರಿ ಸಿದ್ದೀಕ್ ಖಾನ್ ಎಂಬವರು ಮೃತಪಟ್ಟಿದ್ದಾರೆ. ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಯುವಕನೊಬ್ಬ ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರಕಿದೆ ಎಂದವರು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ ಮತ್ತು ಉಮರ್ ಅಬ್ದುಲ್ಲಾ ಸಹಿತ 100ಕ್ಕೂ ಅಧಿಕ ಸ್ಥಳೀಯ ರಾಜಕಾರಣಿಗಳನ್ನು ಗೃಹಬಂಧನದಲ್ಲಿರಿಸಲಾಗಿದೆ. ಆದರೆ ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂಬ ಬಗ್ಗೆ ಪೂರ್ಣ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಎಷ್ಟು ಮಂದಿ ಬಂಧನದಲ್ಲಿದ್ದಾರೆ ಎಂಬ ಸಮಗ್ರ ಅಂಕಿಅಂಶ ಲಭ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಸರಕಾರದ ವಕ್ತಾರ ರೋಹಿತ್ ಕನ್ಸಾಲ್ ಹೇಳಿದ್ದಾರೆ.

 ಆದರೆ ಎಎಫ್‌ಪಿ ವಕ್ತಾರರು ಶ್ರೀನಗರದಲ್ಲಿ ಪೊಲೀಸ್ ಮತ್ತು ಭದ್ರತಾ ಸಿಬಂದಿ ಸಹಿತ ಹಲವು ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿದ್ದು ವ್ಯಾಪಕ ಬಂಧನವಾಗಿರುವುದನ್ನು ಅವರು ಖಚಿತ ಪಡಿಸಿದ್ದಾರೆ. ಸುಮಾರು 6 ಸಾವಿರ ಮಂದಿಯನ್ನು ಬಂಧಿಸಿದ ಬಳಿಕ ಮೊದಲು ಶ್ರೀನಗರದ ಸೆಂಟ್ರಲ್ ಜೈಲಿನಲ್ಲಿರಿಸಲಾಗಿತ್ತು. ನಂತರ ಸೇನಾ ವಿಮಾನದಲ್ಲಿ ಸಾಗಿಸಲಾಗಿದೆ ಎಂದವರು ಹೇಳಿದ್ದಾರೆ. ಭಾರತೀಯ ವಾಯುಪಡೆಯ ನಿಯಂತ್ರಣದಲ್ಲಿರುವ ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಪ್ರತೀ ರಾತ್ರಿ ಯುದ್ಧವಿಮಾನದ ಆಗಮನ ಮತ್ತು ನಿರ್ಗಮನವಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಶನಿವಾರ ಶ್ರೀನಗರದ 12ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಘರ್ಷಣೆ ನಡೆದಿದೆ. ಶನಿವಾರ ನಡೆದ ಘರ್ಷಣೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯ ಸರಕಾರದ ವಕ್ತಾರ ಕನ್ಸಾಲ್ ಸ್ಪಷ್ಟಪಡಿಸಿದ್ದಾರೆ.

ತುಂಬಾ ಮಾತಾಡುತ್ತಾನೆ ಎಂದು ಬಂಧನ

ಬಂಧಿತರ ಸಂಖ್ಯೆ ಇನ್ನಷ್ಟು ಹೆಚ್ಚಿರಬಹುದು ಎಂದು ಸ್ಥಳೀಯರು ಅನುಮಾನ ಪಡುತ್ತಿದ್ದರೂ ಯಾರೂ ಹೆಚ್ಚಿನ ಮಾಹಿತಿ ನೀಡಲು ಹೆದರುತ್ತಿದ್ದಾರೆ. ಭದ್ರತಾ ಪಡೆಗಳು ಯಾವಾಗ, ಯಾಕೆ ಬಂಧಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಶ್ರೀನಗರದಲ್ಲಿ ಅಂಗಡಿಯೊಂದರ ಮಾಲಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿದ್ದರೂ ಬಂಧಿಸಲ್ಪಟ್ಟಿದ್ದಾರೆ. ಆತ ಸಿಕ್ಕಾಪಟ್ಟೆ ಮಾತಾಡುತ್ತಾನೆ ಎಂಬ ಕಾರಣಕ್ಕೆ ಅವನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News