ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ಅಪಘಾತ ಪ್ರಕರಣ: ತನಿಖೆ ಪೂರ್ಣಗೊಳಿಸಲು ಸಿಬಿಐಗೆ ಹೆಚ್ಚುವರಿ 2 ವಾರ ಕಾಲಾವಕಾಶ

Update: 2019-08-19 17:38 GMT

ಹೊಸದಿಲ್ಲಿ, ಆ. 19: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಅಪಘಾತದ ಕುರಿತ ತನಿಖೆಗೆ ಸಿಬಿಐಗೆ ಇನ್ನೂ ಮೂರು ವಾರಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಅತ್ಯಾಚಾರ ಸಂತ್ರಸ್ತೆ ಹಾಗೂ ಅವರ ವಕೀಲರ ಹೇಳಿಕೆ ದಾಖಲಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಅಪಘಾತದ ಕುರಿತು ತನಿಖೆ ನಡೆಸಲು ನಾಲ್ಕು ವಾರಗಳ ಕಾಲಾವಕಾಶವನ್ನು ಸಿಬಿಐ ಕೋರಿತ್ತು.

ಸುಪ್ರೀಂ ಕೋರ್ಟ್ ಆದೇಶದಂತೆ ಇವರಿಬ್ಬರನ್ನು ದಿಲ್ಲಿ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಪಘಾತದಲ್ಲಿ ಗಂಭೀರ ಗಾಯಗೊಂಡ ವಕೀಲರಿಗೆ 5 ಲಕ್ಷ ರೂಪಾಯಿ ನೀಡುವಂತೆ ಕೂಡ ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶಿಸಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಬಳಿಕ ಉತ್ತರಪ್ರದೇಶ ಸರಕಾರ ಅತ್ಯಾಚಾರ ಸಂತ್ರಸ್ತೆಗೆ 25 ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ನೀಡಿತ್ತು. ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ಸಂಬಂಧಿಸಿದ ಎಲ್ಲ ಐದು ಪ್ರಕರಣಗಳನ್ನು ದಿಲ್ಲಿಯಲ್ಲಿರುವ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಈ ತಿಂಗಳ ಆರಂಭದಲ್ಲಿ ಆದೇಶಿಸಿತ್ತು. ಅಲ್ಲದೆ 45 ದಿನಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲು ದಿನನಿತ್ಯ ವಿಚಾರಣೆ ನಡೆಸುವಂತೆ ನಿರ್ದೇಶಿಸಿತ್ತು.

ತನ್ನ ಮೇಲೆ ಕುಲದೀಪ್ ಸಿಂಗ್ ಸೆಂಗಾರ್ ಅತ್ಯಾಚಾರ ಎಸಗಿದ್ದಾರೆ ಎಂದು 19 ವರ್ಷದ ಈ ಯುವತಿ ಆರೋಪಿಸಿದ್ದರು. ಜುಲೈ 28ರಂದು ರಾಯ್‌ಬರೇಲಿಯಲ್ಲಿ ಯುವತಿ ಹಾಗೂ ಆಕೆಯ ವಕೀಲ ಸಂಚರಿಸುತ್ತಿದ್ದ ಕಾರಿಗೆ ಟ್ರಕ್ ಢಿಕ್ಕಿಯಾಗಿತ್ತು. ಅಲ್ಲದೆ, ಯುವತಿಯ ಇಬ್ಬರು ಅತ್ತೆಯಂದಿರು ಮೃತಪಟ್ಟಿದ್ದರು. ಯುವತಿ ಹಾಗೂ ಆಕೆಯ ವಕೀಲನಿಗೆ ಗಂಭೀರ ಗಾಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News