ಎಂಸಿಸಿ ಗೌರವ ಆಜೀವ ಸದಸ್ಯರಾಗಿ ಮಿಚೆಲ್ ಜಾನ್ಸನ್

Update: 2019-08-19 19:11 GMT

ಲಂಡನ್, ಆ.19: ಪಂದ್ಯಾಟದ ಕಾನೂನು ಕಾಪಾಡುವ ಮೇರಿಲ್‌ಬೊನ್ ಕ್ರಿಕೆಟ್ ಕ್ಲಬ್‌ನ(ಎಂಸಿಸಿ)ಗೌರವ ಆಜೀವ ಸದಸ್ಯರಾಗಿ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಮಿಚೆಲ್ ಜಾನ್ಸನ್ ಆಯ್ಕೆಯಾಗಿದ್ದಾರೆ.

ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್‌ನ ನಡುವೆ ಲಾರ್ಡ್ಸ್‌ನಲ್ಲಿ ರವಿವಾರ 2ನೇ ಆ್ಯಶಸ್ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾದ ಬಳಿಕ ಕ್ಲಬ್ ತನ್ನ ಟ್ವಿಟರ್‌ನ ಮೂಲಕ ಜಾನ್ಸನ್ ಸದಸ್ಯತ್ವವನ್ನು ಘೋಷಣೆ ಮಾಡಿದೆ. ಆಸ್ಟ್ರೇಲಿಯದ ಪರ 73 ಅಂತರ್‌ರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿರುವ ಜಾನ್ಸನ್ 28.40ರ ಸರಾಸರಿಯಲ್ಲಿ ಒಟ್ಟು 313 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

‘‘ಇದು ಖಂಡಿತವಾಗಿ ನನಗೆ ಅದ್ಭುತ ವಿಚಾರ. ಲಾರ್ಡ್ಸ್‌ನಲ್ಲಿ ಗೌರವ ಆಜೀವ ಸದಸ್ಯನಾಗಿ ಕುಳಿತುಕೊಳ್ಳುತ್ತೇನೆಂದು ಯೋಚಿಸಿಯೇ ಇರಲಿಲ್ಲ. ನಾನೀಗ ಆಕಾಶದಲ್ಲಿ ತೇಲಾಡುತ್ತಿದ್ದೇನೆ. ಎಂಸಿಸಿ ನನ್ನನ್ನು ಗೌರವಿಸಿರುವುದು ಸಂತೋಷದ ವಿಚಾರ. ನನಗೆ ಇದು ನಿಜಕ್ಕೂ ಗೌರವ ತಂದಿದ್ದು, ಈ ಸ್ಥಾನ ತಲುಪಿರುವುದಕ್ಕೆ ನಿಜವಾಗಿಯೂ ಹೆಮ್ಮೆಯಾಗುತ್ತಿದೆ’’ ಎಂದು ಜಾನ್ಸನ್ ಪ್ರತಿಕ್ರಿಯಿಸಿದರು.

ಜಾನ್ಸನ್ 2005ರಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ರಂಗಕ್ಕೆ ಕಾಲಿಟ್ಟಿದ್ದು 2015ರಲ್ಲಿ ನಿವೃತ್ತಿ ಘೋಷಿಸಿದ್ದರು. 2007 ಹಾಗೂ 2015ರ ಆಸ್ಟ್ರೇಲಿಯ ವಿಶ್ವಕಪ್ ಜಯಿಸಿದಾಗ ತಂಡದ ಭಾಗವಾಗಿದ್ದರು. 153 ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಆಸೀಸ್‌ನ್ನು ಪ್ರತಿನಿಧಿಸಿರುವ ಜಾನ್ಸನ್ 239 ವಿಕೆಟ್‌ಗಳನ್ನು ಕಬಳಿಸಿದರೆ, 30 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ 38 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News