ಹಿಮಾಲಯದ 137 ಶಿಖರಗಳನ್ನು ವಿದೇಶಿಗರಿಗೆ ತೆರೆದ ಭಾರತ

Update: 2019-08-21 14:53 GMT

ಹೊಸದಿಲ್ಲಿ, ಆ.21: ಪ್ರವಾಸೋದ್ಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕಾಂಚನಜುಂಗ ಸೇರಿದಂತೆ ಹಿಮಾಲಯದ 137 ಶಿಖರಗಳಿಗೆ ವಿದೇಶಿಗರು ಏರಲು ಭಾರತ ಸರಕಾರ ಅನುಮತಿ ನೀಡಿದೆ.

ಈ ಹಿಂದೆ ಈ ಶಿಖರಗಳನ್ನು ಏರಬೇಕಾದರೆ ವಿದೇಶಿಗರು ರಕ್ಷಣಾ ಮತ್ತು ಗೃಹ ಸಚಿವಾಲಯದ ಅನುಮತಿಯನ್ನು ಕೋರಬೇಕಿತ್ತು. ಈಗ ಈ ಶಿಖರಗಳನ್ನು ಮುಕ್ತಗೊಳಿಸಿರುವುದರಿಂದ ವಿದೇಶಿಗರು ನೇರವಾಗಿ ಭಾರತೀಯ ಪರ್ವತಾರೋಹಿ ಪ್ರತಿಷ್ಠಾನದ ಅನುಮತಿ ಪಡೆದು ಈ ಶಿಖರಗಳನ್ನು ಏರಬಹುದಾಗಿದೆ. ವಿದೇಶಿಗರಿಗೆ ಮುಕ್ತಗೊಳಿಸಲ್ಪಟ್ಟ ಶಿಖರಗಳಲ್ಲಿ ಉತ್ತರಾಖಂಡದ ದುನಗಿರಿ ಮತ್ತು ಹರ್ದಿಯೋಲ್, ಸಿಕ್ಕಿಂನ ಕಬ್ರು ದಕ್ಷಿಣ ಮತ್ತು ಉತ್ತರ, ಜಮ್ಮು ಮತ್ತು ಕಾಶ್ಮೀರದ ಕೈಲಾಸ ಪರ್ವತ ಮತ್ತು ಹಿಮಾಚಲ ಪ್ರದೇಶದ ಮುಲ್ಕಿಲ ಪ್ರಮುಖವಾಗಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್, ಪ್ರವಾಸೋದ್ಯಮ ಇಲಾಕೆಯ ಕೋರಿಕೆಯ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

ಈ ಶಿಖರಗಳನ್ನು ಏರುವ ವಿದೇಶಿಗರು ತಮ್ಮ ಜೊತೆ ಉಪಗ್ರಹ ಫೋನ್ ಕೊಂಡೊಯ್ಯಲು ದೂರಸಂಪರ್ಕ ಇಲಾಕೆಯಿಂದ ಪೂರ್ವ ಅನುಮತಿ ಪಡೆಯಬೇಕು ಹಾಗೂ ಶಿಖರದ ಮೇಲಿನ ಫೊಟೊಗಳನ್ನು ಅನುಮತಿಯಿಲ್ಲದೆ ತೆಗೆಯುವಂತಿಲ್ಲ ಹಾಗೂ ಅನುಮತಿ ನೀಡಲಾದ ಮಾರ್ಗದಲ್ಲೇ ಸಾಗಬೇಕು ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News