ಹೈದರಾಬಾದ್ ವಿವಿ: ಅಯೋಧ್ಯೆ ವಿವಾದ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಪೊಲೀಸರಿಂದ ತಡೆ

Update: 2019-08-21 15:19 GMT

 ಹೈದರಾಬಾದ್,ಆ.21: ಆಲ್ ಇಂಡಿಯಾ ಸ್ಟುಡೆಂಟ್ಸ್ ಅಸೋಸಿಯೇಷನ್(ಎಐಎಸ್‌ಎ) ಮತ್ತು ಸ್ಟುಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳು ಹೈದರಾಬಾದ್ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಯೋಧ್ಯೆ ವಿವಾದ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನವನ್ನು ನಿಲ್ಲಿಸಿದ ಪೊಲೀಸರು ಕನಿಷ್ಠ ಆರು ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು ಪ್ರತಿಭಟನೆಗೆ ಕಾರಣವಾಗಿತ್ತು.

ಆನಂದ ಪಟವರ್ಧನ ಅವರ ‘ರಾಮ್ ಕೆ ನಾಮ್’ ಸಾಕ್ಷ್ಯಚಿತ್ರ ಪ್ರದರ್ಶನಕ್ಕಾಗಿ ವಿದ್ಯಾರ್ಥಿಗಳು ವಿವಿ ಆಡಳಿತದ ಅನುಮತಿಯನ್ನು ಪಡೆದುಕೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿಹಿಂಪ ಪ್ರಯತ್ನಗಳ ಕುರಿತ ಈ ಚಿತ್ರವು 1992ರಲ್ಲಿ ತಯಾರಾಗಿತ್ತು.

ವಿವಿ ಆಡಳಿತದ ದೂರಿನ ಮೇರೆಗೆ ತಾವು ಕ್ರಮವನ್ನು ಕೈಗೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ವಿವಿಯು ಮೊದಲು ಸಮಾಜ ವಿಜ್ಞಾನ ಕಟ್ಟಡದಲ್ಲಿ ಚಿತ್ರ ಪ್ರದರ್ಶನಕ್ಕೆ ಲಿಖಿತ ಅನುಮತಿಯನ್ನು ನೀಡಿತ್ತು. ಬಳಿಕ ಈ ಸ್ಥಳವನ್ನು ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಕ್ಕೆ ನೀಡುವಂತಿಲ್ಲ,ಹೀಗಾಗಿ ಮೊದಲ ವರ್ಷದ ಸಮಾಜಶಾಸ್ತ್ರ ತರಗತಿಯಲ್ಲಿ ಚಿತ್ರ ಪ್ರದರ್ಶನ ನಡೆಸುವಂತೆ ಸೂಚಿಸಿತ್ತು ಎಂದು ಕಾರ್ಯಕ್ರಮದ ಸಂಘಟಕರು ಸುದ್ದಿಸಂಸ್ಥೆಗೆ ತಿಳಿಸಿದರು.

ಚಿತ್ರ ಪ್ರದರ್ಶನ ಆರಂಭಗೊಳ್ಳುವುದಕ್ಕೆ ಕೆಲವೇ ಕ್ಷಣಗಳ ಮುನ್ನ ಒಳನುಗ್ಗಿದ ಸುರಕ್ಷಾ ಸಿಬ್ಬಂದಿ ಮತ್ತು ತೆಲಂಗಾಣ ಪೊಲೀಸರು ಓರ್ವ ವಿದ್ಯಾರ್ಥಿಯ ಬಳಿಯಿದ್ದ ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದರು. ಇದು ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಹೊಯ್ ಕೈಗೆ ಕಾರಣವಾಗಿತ್ತು. ಆರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದು,ನಂತರ ಬಿಡುಗಡೆಗೊಳಿಸಿದ್ದಾರೆ ಎಂದರು.

ಪ್ರತಿಯೊಂದು ಕಾರ್ಯಕ್ರಮಕ್ಕೆ ಮುನ್ನ ಅನುಮತಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸುವ ಮೂಲಕ ವಿವಿಯು ತಮ್ಮ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಅಭಿಷೇಕ ನಂದನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News