ಸರಕಾರ ಅಧಿಕಾರವನ್ನು ದುರುಪಯೋಗಪಡಿಸುತ್ತಿದೆ: ರಾಹುಲ್ ಗಾಂಧಿ

Update: 2019-08-21 15:27 GMT

ಹೊಸದಿಲ್ಲಿ, ಆ.21: ಐಎನ್‌ಎಕ್ಸ್ ಮಾಧ್ಯಮಕ್ಕೆ ಸಂಬಂಧಿಸಿದಂತೆ ಹಣ ವಂಚನೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಧುರೀಣ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಮ್ ಅವರ ಬೆಂಬಲಕ್ಕೆ ನಿಂತ ಪಕ್ಷದ ಹಲವು ನಾಯಕರು ಬುಧವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾಜಿ ವಿತ್ತ ಸಚಿವರೂ ಆಗಿರುವ ಚಿದಂಬರಮ್ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಉದ್ದೇಶದಿಂದ ಕೇಂದ್ರ ಸರಕಾರ ತನಿಖಾ ಸಂಸ್ಥೆಗಳು ಮತ್ತು ಮಾಧ್ಯಮದ ಒಂದು ವಿಭಾಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಪರಿಣಾಮ ಏನೇ ಆದರೂ ನಾವು ಸತ್ಯಕ್ಕಾಗಿ ಹೋರಾಡುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ಆನಂದ್ ಶರ್ಮಾ ಸೇರಿದಂತೆ ಅನೇಕ ನಾಯಕರು ಚಿದಂಬರಮ್ ಅವರ ಪರ ನಿಂತಿದ್ದಾರೆ.

ಐಎನ್‌ಎಕ್ಸ್ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ಚಿದಂಬರಮ್ ಸಲ್ಲಿಸಿದ್ದ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿತ್ತು.

ಐಎನ್‌ಎಕ್ಸ್ ಪ್ರಕರಣದಲ್ಲಿ ಚಿದಂಬರಮ್ ಅವರನ್ನು ಆರೋಪಿಯನ್ನಾಗಿಸಿರುವುದರ ಬಗ್ಗೆ ಖೇದ ವ್ಯಕ್ತಪಡಿಸಿದ ಪ್ರಿಯಾಂಕಾ ಗಾಂಧಿ, ಚಿದಂಬರಮ್ ಅವರು ರಾಜ್ಯಸಭೆಯ ಓರ್ವ ಅತ್ಯಂತ ಸುಶಿಕ್ಷಿತ ಮತ್ತು ಗೌರವಾನ್ವಿತ ಸದಸ್ಯರಾಗಿದ್ದಾರೆ. ಅವರು ವಿತ್ತ ಸಚಿವ ಮತ್ತು ಗೃಹ ಸಚಿವರಾಗಿ ದಶಕಗಳ ಕಾಲ ನಿಷ್ಠೆಯಿಂದ ನಮ್ಮ ದೇಶದ ಸೇವೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News