17 ಲಕ್ಷ ಜನರಿಗೆ 5,000 ಕೋಟಿ ರೂ. ವಂಚನೆ ಆರೋಪ: eBIZ ಎಂಡಿ, ಪುತ್ರನ ಬಂಧನ

Update: 2019-08-21 15:34 GMT
Photo: www.sify.com

ಹೈದರಾಬಾದ್, ಆ.21: ಮಲ್ಟಿಲೆವಲ್ ಮಾರ್ಕೆಟಿಂಗ್ ಕಂಪೆನಿ ಹೆಸರಿನಲ್ಲಿ 17 ಲಕ್ಷ ಜನರಿಗೆ 5,000 ಕೋಟಿ ರೂ. ವಂಚಿಸಿದ ಆರೋಪದಲ್ಲಿ eBIZ ವ್ಯವಸ್ಥಾಪಕ ನಿರ್ದೇಶಕ ಪವನ್ ಮಲ್ಹಾನ್ ಮತ್ತು ಅವರ ಪುತ್ರ ಹಿತಿಖ್ ಮಲ್ಹಾನ್ ನನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ.

‘ಇ ಬಿಝ್’ ಡಾಟ್ ಕಾಮ್ ಪ್ರೈ.ಲಿ. ಕಂಪೆನಿಗೆ, ಅದರ ನಿರ್ದೇಶಕರಿಗೆ ಮತ್ತು ಆರೋಪಿಗಳಿಗೆ ಸೇರಿದ ಬ್ಯಾಂಖ್ ಖಾತೆಗಳಲ್ಲಿರುವ 389 ಕೋಟಿ ರೂ.ಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ಉತ್ತರ ಪ್ರದೇಶದ ನೋಯ್ಡಾದಿಂದ 2001ರಿಂದ ಮಲ್ಹಾನ್ ಈ ಕಂಪೆನಿಯನ್ನು ನಡೆಸುತ್ತಿದ್ದರು.

ಮಲ್ಟಿಲೆವೆಲ್ ಮಾರ್ಕೆಟಿಂಗ್ ಹೆಸರಿನಲ್ಲಿ ಈ ಕಂಪೆನಿಯು ವಂಚಿಸಿದೆ ಎಂದು ನಾಲ್ಕು ದೂರುಗಳು ದಾಖಲಾಗಿವೆ ಎಂದು ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಮಾಹಿತಿ ನೀಡಿದ್ದಾರೆ.

ಇ-ಕಲಿಕಾ ಕೋರ್ಸ್ ಗಳು, ಪ್ರಾಡಕ್ಟ್ ಗಳು ಮತ್ತು ಪ್ರವಾಸ ಪ್ಯಾಕೇಜ್ ಗಳನ್ನು ಕಂಪೆನಿಯು ತನ್ನ ಗ್ರಾಹಕರಿಗೆ ನೀಡುತ್ತಿತ್ತು . ಇದಕ್ಕಾಗಿ ಗ್ರಾಹಕರು ಹಣ ಪಾವತಿಸಿ ಸೇರ್ಪಡೆಗೊಳ್ಳಬೇಕಾಗಿತ್ತು. ನಂತರ ಗ್ರಾಹಕರು ಇತರರನ್ನು ಸೇರ್ಪಡೆಗೊಳಿಸುವಂತೆ ಹೇಳಲಾಗುತ್ತಿತ್ತು ಮತ್ತು ಇದಕ್ಕೆ ಬದಲಾಗಿ ಭಾರೀ ಕಮಿಷನ್ ನೀಡುವುದಾಗಿ ಆಮಿಷವೊಡ್ಡಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News