ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಮೂರನೇ ಸುತ್ತಿಗೆ ಲಗ್ಗೆ ಇಟ್ಟ ಸಿಂಧು

Update: 2019-08-21 17:12 GMT

ಬಾಸೆಲ್(ಸ್ವಿಟ್ಝರ್ಲೆಂಡ್), ಆ.21: ಭಾರತದ ಖ್ಯಾತ ಶಟ್ಲರ್ ಪಿ.ವಿ. ಸಿಂಧು ಈಗ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಸಿಂಧು ಚೈನೀಸ್ ತೈಪೆಯ ಪೈ ಯು-ಪೊ ಅವರನ್ನು 21-14, 21-15 ಗೇಮ್‌ಗಳ ಅಂತರದಿಂದ ಮಣಿಸಿದರು.

ವಿಶ್ವದ ನಂ.5ನೇ ಆಟಗಾರ್ತಿ ಸಿಂಧು ಶ್ರೇಯಾಂಕರಹಿತ ಪೈ ಯು-ಪೊ ವಿರುದ್ಧ ಕೇವಲ 42 ನಿಮಿಷಗಳಲ್ಲಿ ಜಯ ಸಾಧಿಸಿದರು.

ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸಿಂಧು ಅವರು 2ನೇ ಪಂದ್ಯದಲ್ಲಿ ಪೈ ಯು-ಪೊ ವಿರುದ್ಧ ಉತ್ತಮ ಆರಂಭ ಪಡೆದರು. ವಿರಾಮದ ವೇಳೆ 24ರ ಹರೆಯದ ಸಿಂಧು 11-7 ಮುನ್ನಡೆ ಪಡೆದರು. ಕೇವಲ 18 ನಿಮಿಷಗಳಲ್ಲಿ ಮೊದಲ ಗೇಮ್‌ನ್ನು 21-14ರಿಂದ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ ಪೈ ಯು-ಪೊ ತಿರುಗೇಟು ನೀಡಲು ಯತ್ನಿಸಿದರು. ಮಧ್ಯಮ-ವಿರಾಮದ ವೇಳೆಗೆ 11-10 ಲೀಡ್‌ನಲ್ಲಿದ್ದರು.ಆಗ ತಿರುಗೇಟು ನೀಡಿದ ಸಿಂಧು 24 ನಿಮಿಷಗಳಲ್ಲಿ 2ನೇ ಗೇಮ್‌ನ್ನು 21-15 ಅಂತರದಿಂದ ಜಯಿಸಿದರು.

ಸಿಂಧು ಮೂರನೇ ಸುತ್ತಿನಲ್ಲಿ ಝಾಂಗ್ ಬಿವೆನ್(ಅಮೆರಿಕ)ಅಥವಾ ಸುಯನ್-ಯು ವೆಂಡಿ ಚೆನ್(ಆಸ್ಟ್ರೇಲಿಯ)ಅವರನ್ನು ಎದುರಿಸಲಿದ್ದಾರೆ.

ಇದಕ್ಕೂ ಮೊದಲು ನಡೆದ ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಮೇಘನಾ ಹಾಗೂ ಪೂರ್ವಿಶಾ ರಾಮ್ ಜಪಾನ್‌ನ ಶಿಹೊ ಟನಕ ಹಾಗೂ ಕೊಹರು ಯೊನೆಮೊಟೊ ವಿರುದ್ಧ 8-21, 18-21 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News