ಕ್ರಿಶ್ಚಿಯನ್ ಸಮುದಾಯದ ಬಗ್ಗೆ ನ್ಯಾಯಾಧೀಶರ ಹೇಳಿಕೆಗೆ ವಕೀಲರ ಖಂಡನೆ

Update: 2019-08-22 16:19 GMT

ಚೆನ್ನೈ, ಆ.22: ಕ್ರಿಶ್ಚಿಯನ್ ಸಂಸ್ಥೆಗಳಿಗೆ ಸಂಬಂಧಿಸಿದ ಯಾವುದೇ ಪ್ರಕರಣವನ್ನು ನ್ಯಾ. ಎಸ್ ವೈದ್ಯನಾಥನ್ ಇರುವ ಪೀಠಕ್ಕೆ ವಹಿಸಬಾರದು ಎಂದು ಆಗ್ರಹಿಸಿ ವಕೀಲರ ಗುಂಪೊಂದು ಮದ್ರಾಸ್ ಹೈಕೋರ್ಟ್‌ಗೆ ಪತ್ರ ಬರೆದಿದೆ.

ನ್ಯಾಯಾಧೀಶ ಎಸ್. ವೈದ್ಯನಾಥನ್ ನಡವಳಿಕೆ ಸಂವಿಧಾನ ಮತ್ತು ಕಾನೂನನ್ನು ಎತ್ತಿಹಿಡಿಯುವುದಾಗಿ ಪ್ರಮಾಣ ಮಾಡಿರುವ ನ್ಯಾಯಾಧೀಶರಿಗೆ ತಕ್ಕುದಾಗಿಲ್ಲ. ಅವರ ಆದೇಶವು ನ್ಯಾಯಾಂಗ ಶಿಸ್ತಿನ ಉಲ್ಲಂಘನೆಯಾಗಿದೆ ಎಂದು 64 ಹಿರಿಯ ವಕೀಲರು ಸಹಿ ಹಾಕಿರುವ ಪತ್ರದಲ್ಲಿ ತಿಳಿಸಲಾಗಿದೆ. ಈ ಮಧ್ಯೆ, ಕ್ರಿಶ್ಚಿಯನ್ ಸಮುದಾಯದ ಕುರಿತ ತನ್ನ ವಿವಾದಾತ್ಮಕ ಹೇಳಿಕೆಯನ್ನು ನ್ಯಾ. ವೈದ್ಯನಾಥನ್ ಹಿಂಪಡೆದಿದ್ದಾರೆ.

 ನ್ಯಾಯಾಲಯದಲ್ಲಿ ತೀರ್ಮಾನಿಸಲಾಗದ ವಿಷಯದ ಬಗ್ಗೆಯೂ ವೈದ್ಯನಾಥನ್ ತನ್ನ ಅಭಿಪ್ರಾಯ ಸೂಚಿಸಿ ಆದೇಶ ನೀಡುತ್ತಾರೆ. ಇದು ನ್ಯಾಯಸ್ಥಾನದ ದುರುಪಯೋಗವಾಗಿದೆ ಮತ್ತು ಕೋಮು ಹಿಂಸೆ ಹಬ್ಬಿಸುವ, ಲಿಂಗಾಧಾರಿತ ತಾರತಮ್ಯದ ವರ್ತನೆಯಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಪತ್ರವನ್ನು ಆಗಸ್ಟ್ 20ರಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರೆದುರು ಪ್ರಸ್ತುತ ಪಡಿಸಲಾಗಿದೆ. ದೇವಸ್ಥಾನದಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ರೂಪಿಸಬೇಕೆಂದು 2015ರಲ್ಲಿ ವೈದ್ಯನಾಥನ್ ನೀಡಿದ್ದ ಸಲಹೆಯನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದೇವಸ್ಥಾನದಲ್ಲಿ ನಡೆಯುವ ಜಾತ್ರೆಯ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ, ವಸ್ತ್ರಸಂಹಿತೆಗೆ ಒಪ್ಪಿದರೆ ಅನುಮತಿ ನೀಡಬಹುದು ಎಂದು ವೈದ್ಯನಾಥನ್ ಸಲಹೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News