ಕುಲಕಸುಬು ಬಿಡಿ, ಶಿಕ್ಷಣದ ಬೆನ್ನು ಹತ್ತಿ

Update: 2019-08-22 18:37 GMT

ಶುಕ್ರವಾರ ಅಕ್ಟೋಬರ್ 28, 1932ರಂದು ಮುಂಬೈನ ಅಪೋಲೋ ಬಂದರ್ ಬಳಿ ಇರುವ ಸರ್ ಕಾವಸ್ ಜೀ ಜಹಾಂಗೀರ್ ಹಾಲ್‌ನಲ್ಲಿ ಅಸ್ಪೃಶ್ಯ ವರ್ಗದ ನೇತಾರ ಡಾ. ಪಿ. ಜಿ. ಸೋಳಂಕಿ ಅವರ ಅಧ್ಯಕ್ಷತೆಯಲ್ಲಿ ಭಾರತದ ದಲಿತ ವರ್ಗದ ನಾಯಕ ಡಾ. ಅಂಬೇಡ್ಕರ್ ಅವರನ್ನು ಕೃಷಿ ಸಮಾಜದ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸನ್ಮಾನ ಸ್ವೀಕರಿಸಿದ ಡಾ. ಅಂಬೇಡ್ಕರ್ ಹೇಳಿದ್ದಿಷ್ಟು:

ನನಗಂತೂ ಹೃದಯ ತುಂಬಿ ಬಂದಿದೆ. ಈ ಮಾನಪತ್ರ ಕೇವಲ ನನಗೆ ಮಾತ್ರ ನೀಡಲಾಗುತ್ತಿದೆ. ಆಗುತ್ತಿರುವ ಯಾವುದೇ ಅಸ್ಪೃಶ್ಯ ವರ್ಗದ ಕೆಲಸಗಳು ಕೇವಲ ನನ್ನಿಂದ ಮಾತ್ರ ಆಗುತ್ತಿವೆ ಎನ್ನುವುದು ಶುದ್ಧ ಸುಳ್ಳು. ಯಾವ ಕೆಲಸಕ್ಕಾಗಿ ನನಗೆ ನೀವು ನೀಡುತ್ತಿರುವ ಶ್ರೇಯಸ್ಸಿಗಿಂತ ಹೆಚ್ಚಿನ ಶ್ರೇಯಸ್ಸನ್ನು ಡಾ. ಸೋಳಂಕಿ ಮತ್ತು ನನ್ನೊಂದಿಗೆ ಕೆಲಸ ಮಾಡುತ್ತಿರುವ ಇತರರಿಗೂ ನೀಡಬೇಕಾಗುತ್ತದೆ. ಡಾ. ಸೋಳಂಕಿ ನನ್ನೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದ್ದಾರೆ. ಕಳೆದ ಮೂರು ವರ್ಷಗಳಿಂದ ಕೌನ್ಸಿಲ್‌ನಲ್ಲಿ ನಾನು ಯಾವುದೇ ಕೆಲಸ ಮಾಡಿಲ್ಲ. ಆದರೆ ಡಾ. ಸೋಳಂಕಿ ಮಾತ್ರ ಅಸ್ಪೃಶ್ಯರ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಪುಣೆಯಲ್ಲಿ ಹಿಂದೂ ನಾಯಕರೊಂದಿಗೆ ಮಾತುಕತೆ ನಡೆಯುತ್ತಿದ್ದ ವೇಳೆ ಡಾ. ಸೋಳಂಕಿ ನನ್ನ ಬೆನ್ನಿಗೆ ನಿಂತು ಕೆಲಸ ಮಾಡಿದ್ದಾರೆ. ಅವರು ತಮಗೆ ದೊರೆಯಬೇಕಾದ ಸನ್ಮಾನ ಸ್ವೀಕರಿಸದೆ ನನಗೆ ನೀಡಬೇಕು ಎಂದು ಹೇಳಿರುವುದು ಅವರ ಔದಾರ್ಯಕ್ಕೆ ಹಿಡಿದ ಕನ್ನಡಿ. ಅಂತಿಮವಾಗಿ ನಾನು ನಿಮಗೆ ಹೇಳುವುದು ಇಷ್ಟೇ. ಪುಣೆ ಒಪ್ಪಂದದಲ್ಲಿ ನಮಗೆ ಲಭಿಸಿರುವ ಸೌಲಭ್ಯಗಳ ಪ್ರಯೋಜನವನ್ನು ನಮ್ಮ ಜನರು ಯಾವ ರೀತಿಯಲ್ಲಿ ಪಡೆಯಲಿದ್ದಾರೆ ಎನ್ನುವುದು ನನಗೆ ತಿಳಿಯುತ್ತಿಲ್ಲ. ಸಂಸಾರದ ಜಂಜಾಟದಲ್ಲಿ ಮನುಷ್ಯನಿಗೆ ಬರುವ ಸುಖ ದುಃಖಗಳನ್ನು ದೇವರ ಇಚ್ಛೆಯಂತೆ ಅನುಭವಿಸಲೇಬೇಕು. ನಮ್ಮ ದಾರಿದ್ರ ನಮ್ಮ ಪಾಲಿಗೆ ಬಂದದ್ದು ಎಂದು ಭಾವಿಸುವವರು ಇದ್ದಾರೆ.

ಆ ಕಾರಣಕ್ಕೆ ನಾನು ಹೇಳುವುದು ಎಂದರೆ ನಮ್ಮನ್ನು ನಾವೇ ಕೀಳರಿಮೆಯಿಂದ ನೋಡಿಕೊಳ್ಳಲೇ ಬಾರದು. ಇದೀಗ ರಾಜಕಾರಣದಲ್ಲಿ ಆಗಿರುವ ಬದಲಾವಣೆಗೆ ಉನ್ನತ ವರ್ಗದ ಹಿಂದೂಗಳು ಯಾವುದೇ ಬೆಲೆ ನೀಡುವುದಿಲ್ಲ. ಅವರು ಈ ದೇಶದ ಆಡಳಿತ ಚುಕ್ಕಾಣಿ ಹಿಡಿಯುವವರು ಎಂದು ಭಾವಿಸಿದ್ದಾರೆ. ಆದರೆ ಇನ್ನು ಮುಂದೆ ಮತ್ತೆ ಯಾವುದೇ ಕಾರಣಕ್ಕೂ ಹಿಂದೂಗಳ ದಾಸ್ಯಕ್ಕೆ ಒಳಗಾಗುವಂತಹ ಪ್ರಸಂಗ ಉದ್ಭವಿಸದು ಅದಕ್ಕೆ ಕಾರಣ ಇಷ್ಟೇ ಯಾವುದೇ ಕಾನೂನು ಅಸ್ಪೃಶ್ಯರ ಒಪ್ಪಿಗೆ ಇದ್ದರೆ ಮಾತ್ರ ಜಾರಿಗೆ ಬರಬೇಕಾದಂತಹ ಸಾಮಾಜಿಕ ಕ್ರಾಂತಿ ಘಟಿಸಿದೆ. ಅಸ್ಪೃಶ್ಯರಿಗೆ ಇಂದು ಲಭಿಸುವ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಉನ್ನತ ಹಿಂದೂ ವರ್ಗದಿಂದ ನಡೆಯಲಿದೆ. ಸಮಾನತೆ ತತ್ವದ ಮೇಲೆ ಗಾಂಧೀಜಿ ಅವರೊಂದಿಗೆ ಆಗಿರುವ ಈ ಒಪ್ಪಂದ ಹಿಂದೂಗಳಿಗೆ ಇಷ್ಟವಾಗಿಲ್ಲ ಎನ್ನುವುದನ್ನು ಗುರುತಿಸಿದ್ದೇನೆ. ಮಹಾತ್ಮ್ಮಾ ಗಾಂಧೀಜಿಯವರು ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದರಿಂದ ಅವರನ್ನು ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ಹಿಂದೂಗಳು ಈ ಒಪ್ಪಂದ ಮಾಡಿಕೊಂಡಿದ್ದಾರೆ. ಆದಾಗ್ಯೂ ಕೂಡಾ ಅವರು ನಮ್ಮ ಕೈಗೆ ಬಂದಿರುವ ಅಧಿಕಾರ ಕಿತ್ತುಕೊಳ್ಳುವುದಕ್ಕೆ ಪ್ರಯತ್ನಿಸಿದ್ದಾರೆ ಎಂಬ ಸಂಶಯದ ಜೊತೆಗೆ ನೀವು ನಿಮ್ಮ ಕೈಗೆ ಸಿಕ್ಕಿರುವ ಅಧಿಕಾರ ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯೂ ಇದೆ.

ಇನ್ನೊಂದು ಮಹತ್ವದ ಸಂಗತಿ ನಾನಿಲ್ಲಿ ಸ್ಪಷ್ಟಪಡಿಸುತ್ತೇನೆ. ಸಹ ಭೋಜನ ಆಗಲಿ ಅಥವಾ ಮಂದಿರ ಪ್ರವೇಶಕ್ಕೆ ನಾನು ವಿರುದ್ಧವಾಗಿಲ್ಲ. ಆದರೆ ಇಂತಹ ಕ್ರಮಗಳಿಂದ ನಮಗೆ ರಾಜಕೀಯ ಅಧಿಕಾರ ಲಭಿಸದು. ನಮಗೆ ಸಂಸಾರ ನಡೆಸುವ ಅವಶ್ಯಕತೆ ಇದೆ. ತಿನ್ನಲು ಅನ್ನ, ಧರಿಸಲು ಬಟ್ಟೆ, ಇರುವುದಕ್ಕೆ ನೆಮ್ಮದಿಯ ಸೂರು ಬೇಕಿದೆ. ಯಾವ ರೀತಿ ಉನ್ನತ ವರ್ಗದ ಹಿಂದೂಗಳು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುತ್ತಾರೋ ಅಂತಹದ್ದೇ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡುವುದು ಅತ್ಯಗತ್ಯವಾಗಿದೆ ಮತ್ತು ಅದೇ ರೀತಿ ಸರಕಾರದ ಎಲ್ಲ ಹುದ್ದೆಗಳಲ್ಲೂ ಸೇರಿಕೊಳ್ಳುವಂತೆ ಕೆಲಸ ನಾವು ಮಾಡಿದರೆ ಮಾತ್ರ ಉದ್ಧಾರವಾಗುತ್ತೇವೆ.

ಕೊನೆಗೆ ಋಷಿ ಮಂಡಳಿಗೆ ನನ್ನ ಪ್ರೀತಿಪೂರ್ವಕ ಸೂಚನೆ ಎಂದರೆ, ಅಸ್ಪೃಶ್ಯ ವರ್ಗದಲ್ಲೂ ಇರುವ ಜಾತಿ ವ್ಯವಸ್ಥೆ ನಿರ್ಮೂಲನೆ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಅಸ್ಪೃಶ್ಯ ವರ್ಗವನ್ನು ಸಾಮಾಜಿಕವಾಗಿ ಸುಧಾರಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಬೇಕಿದೆ. ಮನೆಯ ಅಡಿಪಾಯ ಗಟ್ಟಿ ಇದ್ದಷ್ಟು ಕಟ್ಟಡ ಹೇಗೆ ಬಾಳಿಕೆ ಬರುತ್ತದೋ ಅದೇ ರೀತಿ ಋಷಿ ಸಮಾಜ ಅಸ್ಪೃಶ್ಯ ವರ್ಗದ ಅಡಿಪಾಯ ಆಗಿದ್ದು, ಈ ಕಾರಣಕ್ಕಾಗಿ ಅದರ ಸಾಮಾಜಿಕ ಕಾರ್ಯಗಳು ಅಸ್ಪೃಶ್ಯರಿಗೆ ಆದರ್ಶವಾಗಬೇಕು. ನಾವು ಯಾವುದೇ ಜಾತಿಯನ್ನು ನೀಚವೂ ಅಲ್ಲ, ಉಚ್ಚ ಎಂದೂ ಭಾವಿಸುವುದಿಲ್ಲ ಎಂದು ಋಷಿಸಮಾಜ ಪ್ರಕಟಿಸಿದ್ದೇ ಆದಲ್ಲಿ ಅಸ್ಪೃಶ್ಯ ವರ್ಗದಲ್ಲಿನ ಸಾಮಾಜಿಕ ಸುಧಾರಣೆಗೆ ವೇಗ ಬರುತ್ತದೆ. ಇನ್ನೊಂದು ವಿಷಯ ಎಂದರೆ ಉಚ್ಚ ವರ್ಗದ ಜನರು ನಮ್ಮಲ್ಲಿ ಭಂಗಿಯ ಕೆಲಸ ವಂಶ ಪಾರಂಪರ್ಯಪರ ಎಂದು ಬೆಳೆಸಿರುವ ಭಾವನೆ ಈಗ ನಮ್ಮ ಮನೋವೃತ್ತಿಯಾಗಿ ಬಿಟ್ಟಿದೆ. ಇಂಥ ಮನೋಭಾವ ನಮ್ಮಲ್ಲಿ ಬೆಳೆಯಲು ನಮ್ಮ ಆರ್ಥಿಕ ಸ್ಥಿತಿಗತಿ ಕಾರಣ ಅಷ್ಟೇ. ಭಂಗಿ ಕೆಲಸ ಮಾಡುತ್ತಿರುವ ನಮ್ಮ ಜನರು ಇದನ್ನು ಕುಲಕಸುಬನ್ನಾಗಿಸುವ ಧೋರಣೆ ಕೈಬಿಟ್ಟು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಆದ್ಯತೆ ನೀಡಬೇಕು.

ಅಸ್ಪೃಶ್ಯತೆ ಬೇರು ಸಮೇತ ನಿರ್ನಾಮವಾದರೆ ಮಾತ್ರ ನಮ್ಮ ಸ್ಥಿತಿಗತಿಯಲ್ಲಿ ಒಂದಿಷ್ಟು ಬದಲಾವಣೆ ಆಗುತ್ತದೆ. ಆದರೂ ಕೂಡ ಉಚ್ಚವರ್ಗದ ಹಿಂದೂಗಳ ಮಾತಿಗೆ ಮಣೆ ಹಾಕುವುದನ್ನು ಬಿಟ್ಟು ನಮ್ಮ ಉದ್ಧಾರಕ್ಕೆ ನಾವೇ ಶ್ರಮಿಸಬೇಕು. ಇಂದು ನೀವು ನನಗೆ ಸನ್ಮಾನ ಮಾಡಿ ಗೌರವ ತೋರಿದ್ದೀರಿ ಅದಕ್ಕೆ ನಾನು ಕೃತಜ್ಞ ಎಂದು ಹೇಳಿ ಮಾತಿಗೆ ವಿರಾಮ ನೀಡುತ್ತೇನೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News