ತ್ರಿವಳಿ ತಲಾಕ್ ಕಾನೂನು ಸುಪ್ರೀಂಕೋರ್ಟ್‌ನಿಂದ ಪರಿಶೀಲನೆ, ಕೇಂದ್ರಕ್ಕೆ ನೋಟಿಸ್

Update: 2019-08-23 17:33 GMT

ಹೊಸದಿಲ್ಲಿ, ಆ.23: ಕಳೆದ ತಿಂಗಳು ಸಂಸತ್ತಿನಲ್ಲಿ ಜಾರಿಗೆ ಬಂದಿರುವ ತ್ರಿವಳಿ ತಲಾಕ್ ಕಾನೂನನ್ನು ಸುಪ್ರೀಂಕೋರ್ಟ್ ಪರಿಶೀಲನೆ ನಡೆಸಲಿದ್ದು, ಇಂದು ಕೇಂದ್ರ ಸರಕಾರಕ್ಕೆ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.

ತ್ರಿವಳಿ ತಲಾಕ್ ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಮೂರು ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಂಡಿದೆ. ತ್ರಿವಳಿ ತಲಾಕ್ ಕಾನೂನನ್ನು ಅಸಂವಿಧಾನಿಕ ಎಂದು ನ್ಯಾಯಾಲಯ ಘೋಷಿಸಬೇಕೆಂದು ಅರ್ಜಿದಾರರು ಆಗ್ರಹಿಸಿದ್ದಾರೆ.

‘‘ನಾವು ತ್ರಿವಳಿ ತಲಾಕ್ ಕಾನೂನನ್ನು ಪರೀಕ್ಷಿಸುತ್ತೇವೆ’’ ಎಂದು ಓರ್ವ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ಗೆ ನ್ಯಾಯಪೀಠ ತಿಳಿಸಿತು.

ತ್ರಿವಳಿ ತಲಾಕ್ ಕಾನೂನು ವಿರುದ್ಧ ಸುನ್ನಿ ಮುಸ್ಲಿಂ ಪಂಡಿತರ ಧಾರ್ಮಿಕ ಸಂಘಟನೆ ಸಮಸ್ತ ಕೇರಳ ಜಮೀಯತುಲ್ ಉಲಾಮ, ರಾಜಕಾರಣಿ ಮತ್ತು ಮುಸ್ಲಿಂ ವಿದ್ವಾಂಸ ಆಮಿರ್ ರಶೀದ್ ಮದನಿ ಹಾಗೂ ಮುಸ್ಲಿಂ ಸಂಘಟನೆ ಜಮೀಯತ್ ಉಲಾಮ-ಎ- ಹಿಂದ್ ಮೇಲ್ಮನವಿ ಸಲ್ಲಿಸಿವೆ. 

ತ್ರಿವಳಿ ತಲಾಕ್ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿ ಮಾಡಿರುವುದು ಹಾಗೂ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿರುವುದನ್ನು ನ್ಯಾಯಾಲಯ ಪರಿಶೀಲಿಸುವ ಅಗತ್ಯವಿದೆ ಎಂದು ಖುರ್ಷಿದ್ ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News