ನಿಸ್ವಾರ್ಥ ಸೇವೆಯನ್ನೇ ಬದುಕಾಗಿಸಿದ ಶಮೀರ್ ಗಾಗಿ ಕಂಬನಿ ಮಿಡಿಯಿತು ಇಡೀ ಊರು

Update: 2019-08-23 12:34 GMT
ಶಮೀರ್

‘‘ಅಣ್ಣ, ನಿನಗೇನು ಆಗದು, ನಿಮ್ಮ ಆರೋಗ್ಯಕ್ಕಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಆಯೋಜಿಸಿದ್ದೇವೆ’’, ‘‘ನಾವು ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತಿದ್ದೇವೆ’’. ‘‘ನಾವೆಲ್ಲರೂ ಅಲ್ಲಾಹನಲ್ಲಿ ನಿನಗಾಗಿ ದುಆ ಮಾಡುತ್ತಿದ್ದೇವೆ’’

ಇವು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಮೀರ್ ಎಂಬ ಪರೋಪಕಾರಿಯ ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದವರು ಹೇಳುತ್ತಿದ್ದ ಸಾಂತ್ವನದ ಮಾತುಗಳಿವು. ಆದರೆ ವಿಧಿನಿಯಮ ಬೇರೆಯೇ ಇತ್ತು.  ತೀವ್ರ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶಮೀರ್ ನಮ್ಮನ್ನಗಲಿ ಇದೀಗ ಮೂರು ತಿಂಗಳು ಕಳೆದಿದೆ.

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕುಳಾಲು ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಶಮೀರ್ ಹುಟ್ಟೂರಲ್ಲೇ ಪ್ರಾಥಮಿಕ ಶಿಕ್ಷಣ  ಪಡೆದು ಮಂಚಿ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದರು. ಪಿಯುಸಿ ಶಿಕ್ಷಣವನ್ನು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ  ನಿರ್ವಹಿಸಿದರು. ನಿಧನರಾಗುವಾಗ ಅವರಿಗೆ 39 ವರ್ಷ ವಯಸ್ಸು.

ಊರಿನ ಬಡವರ ಕಷ್ಟ ಕಾರ್ಪಣ್ಯಗಳನ್ನು ಕಂಡು ಮರುಗಿದ ಯುವಕ ಶಮೀರ್, ತನ್ನ ಜೀವನವನ್ನು ಬಡವರ ಸೇವೆಗಾಗಿ ಮೀಸಲಿಟ್ಟಿದ್ದರು. 
ಮೊದಲು ಸಮಾಜದ ಬಡವರ್ಗಗಳಿಗೆ ಸರಕಾರದಿಂದ ಲಭಿಸುತ್ತಿದ್ದ ಸಹಕಾರವನ್ನುಅರ್ಹರಿಗೆ ತಲಪಿಸುವಲ್ಲಿ  ಶ್ರಮಿಸಲಾರಂಭಿಸಿದ್ದರು.  ಬಳಿಕ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಕುಟುಂಬದ, ಊರು-ಪರ ಊರಿನ ಎಲ್ಲ ವರ್ಗ, ಜಾತಿ-ಧರ್ಮದ, ಎಲ್ಲ ಅರ್ಹ, ಆರ್ಥಿಕವಾಗಿ  ಹಿಂದುಳಿದ ಎಲ್ಲ ಕುಟುಂಬಗಳಿಗೂ ಆಪತ್ಭಾಂಧವರಾಗಿದ್ದರು.

ಯಾವ ಮನೆಯಲ್ಲಿ ಬಡ ಹೆಣ್ಣು ಮಗಳ ಮದುವೆ ನಡೆಯುತ್ತಿದೆಯೋ, ಅಂಥವರಿಗೆ ಥಟ್ಟನೆ ನೆನಪಾಗುತ್ತಿದ್ದದ್ದು ಶಮೀರ್. ತಾನು ಆರ್ಥಿಕವಾಗಿ ಹಿಂದುಳಿದಿದ್ದರೂ, ಆರ್ಥಿಕವಾಗಿ ಬಲಿಷ್ಠರಾಗಿದ್ದ ವ್ಯಾಪಾರಿಗಳಿಂದ, ಅನಿವಾಸಿ ಭಾರತೀಯರಿಂದ, ಎನ್‌ಜಿಒಗಳಿಂದ ಏನೆಲ್ಲ ಆರ್ಥಿಕ ಸಹಕಾರ  ದೊರಕುತ್ತದೆಯೋ,  ಅದೆಲ್ಲವನ್ನು ಅವರಿಗೆ ದೊರಕಿಸುವಲ್ಲಿ ಶ್ರಮಿಸುತ್ತಿದ್ದರು. ಅದಲ್ಲದೆ ಮದುವೆಯ ಮನೆಯ  ಎಲ್ಲ ಕೆಲಸವನ್ನು  ತನ್ನ  ಗೆಳೆಯರ ಸಹಾಯದಿಂದ ಉದಾರವಾಗಿ ಮಾಡಿಕೊಡುತ್ತಿದ್ದರು. ಈ ಕೆಲಸವನ್ನು ಅವರು ಜಾತಿ-ಧರ್ಮವನ್ನು ಮೀರಿ ಮಾಡುತ್ತಿದ್ದರು  ಎಂಬುದು  ವಿಶೇಷ.

‘‘ನನ್ನ ಮಗಳ ಮಾಡುವೆ ನಿಶ್ಚಯವಾದಾಗ ನನ್ನಲ್ಲಿ ಒಂದು ರೂಪಾಯಿ ಕೂಡಾ ಇರಲಿಲ್ಲ. ಆದರೆ ಶಮೀರ್, ನೀವು ಗಾಬರಿಯಾಗಬೇಡಿ. ಮದುವೆಗೆ ಹಣ ಆಯೋಜಿಸುವುದು ನನ್ನ ಕೆಲಸ ಎಂದಿದ್ದ. ಆದರೆ ಈಗ ಆತನೇ ನಮ್ಮೊಂದಿಗಿಲ್ಲ. ನನ್ನ ತಂದೆ ಮರಣ ಹೊಂದಿದ ಸಮಯದಲ್ಲೂ  ನಾನು ಇಷ್ಟೊಂದು  ವೇದನೆ ಅನುಭವಿಸಿಲ್ಲ’’ ಎನ್ನುವುದು ಓರ್ವ ತಂದೆಯ ಭಾವುಕ ಮಾತು.

 ಕುಳಾಲು ಹಾಗೂ ಸುತ್ತಮುತ್ತಲಿನ ಎಲ್ಲ ಬಡವರ ಮನೆಗಳನ್ನು ಸಂದರ್ಶಿಸುತ್ತಿದ್ದ ಶಮೀರ್ ಅವರ ಸಂಕಷ್ಟಗಳಿಗೆ ಸದಾ ಸಹಾಯಹಸ್ತ ಚಾಚುತ್ತಿದ್ದರು. ಊರಿನಲ್ಲಿ ಯಾರಾದರೂ ಅನಾರೋಗಕ್ಕೀಡಾದರೆ ಮೊದಲು ಕರೆಹೋಗುತ್ತಿದ್ದುದು ಶಮೀರ್ ಅವರಿಗೆ. ಆಸ್ಪತ್ರೆಯ ವೆಚ್ಚ ಭರಿಸಲು ಕಷ್ಟವಾದರೆ ಅಂತಹ ರೋಗಿ ಗುಣಮುಖಿಯಾಗಿ ಬರುವ ವರೆಗೂ ಅವರ ನೆರವಿಗೆ ಸದಾ ಜೊತೆಗಿರುತ್ತಿದ್ದ. ಇದಲ್ಲದೆ ಸರಕಾರದಿಂದ ಸವಲತ್ತುಗಳನ್ನು ಅರ್ಹರಿಗೆ ಸಿಗುವಂತಾಲು ಅದರ ಹಿಂದೆ ಓಡಾಡುತ್ತಿದ್ದ ಶಮೀರ್ ಇವೆಲ್ಲವನ್ನು ಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದರು. 

ಊರಿನ ಎಲ್ಲ ಜಾತಿ, ಧರ್ಮದ ಜನರ ಸಂಕಷ್ಟಕ್ಕೆ ಹೆಗಲಾಗುತ್ತಿದ್ದ ಶಮೀರ್ ಊರಿನ ಮಸೀದಿ, ಮಂದಿರ, ಚರ್ಚ್‌ಗಳಿಗೆ ತನ್ನದೇ ರೀತಿಯ ಸಹಕಾರ ನೀಡಿದ್ದರು. ಇವೆಲ್ಲದರ ನಡುವೆ ತನ್ನ ಜೀವನದ ಕಷ್ಟವನ್ನು ಯಾರಲ್ಲೂ ಹೇಳಿಕೊಳ್ಳದ ಶಮೀರ್ ಹೃದಯ ಸಂಬಂಧಿ ಖಾಯಿಲೆಯಿಂದ  ಬಳಲುತ್ತಿದ್ದರು.

ನಡೆದಾಡಲು, ಉಸಿರಾಡಲು ಕಷ್ಟಪಡುತ್ತಿದ್ದ ಸಂದರ್ಭದಲ್ಲೂ ತನ್ನ ನೋವನ್ನು ಯಾರಿಗೂ ಹೇಳಲಿಲ್ಲ. ಕೊನೆಗೆ ಖಾಯಿಲೆ ಉಲ್ಬಣಗೊಂಡು 
ಕಾಲು ಊದಿಕೊಂಡಿತ್ತು. ನಿದ್ರಿಸಲು ಕಷ್ಟಪಡುವ ಹಂತ ತಲುಪಿದ್ದ ಶಮೀರ್ ಆ ಸಂದರ್ಭದಲ್ಲೂ  ಊರಿನ ಓರ್ವ  ಬಡ ಹೆಣ್ಣು ಮಗಳ  ಮದುವೆಗಾಗಿ ಲಕ್ಷದವರೆಗೆ ಹಣಕಾಸು ಸಂಗ್ರಹಿಸಿ ಕೊಟ್ಟು ಸಹಕರಿಸಿದ್ದರು.

ಸಮಾಜ ಸೇವೆಯ ಮೂಲಕ ಕೋಮು ಸೌಹಾರ್ದದ ಪಾಠವನ್ನು ತನ್ನ ನಡತೆಯ ಮುಖಾಂತರ ತೋರಿಸಿಕೊಟ್ಟ ಶಮೀರ್ ಮೂರು ತಿಂಗಳ ಹಿಂದೆ (ಮೇ 21ರಂದು) ಖಾಯಿಲೆ ಉಲ್ಬಣಿಸಿ ಕೊನೆಯುಸಿರೆಳೆದಿದ್ದಾರೆ.

ಅವರ ನಿಧನದ ವಿಷಯ ಅರಿತು ಹಿಂದೂ, ಮುಸ್ಲಿಮ್, ಕ್ರೈಸ್ತರೆನ್ನದೆ ಅಲ್ಲಿ ನೆರೆದಿದ್ದ ಎಲ್ಲರೂ ತಮಗರಿವಿಲ್ಲದೆ ಕಣ್ಣೀರು ಹರಿಸಿದ್ದರು. ನನ್ನ ಬಾಳಿನ ಆರಂಭದಲ್ಲಿ ನನ್ನ ಆತ್ಮೀಯ ಸಹಪಾಠಿಯಾಗಿ, ನನ್ನ ಆತ್ಮೀಯ ಸ್ನೇಹಿತನಾಗಿ ನನ್ನ ಜೊತೆಗಿದ್ದ ನನ್ನ ಅಣ್ಣ ಶಮೀರ್ ಅಗಲುವಿಕೆಯನ್ನು  ಅರಗಿಸಿಕೊಳ್ಳಲು ನನಗೆ ತುಂಬಾ ಸಮಯವೇ ಬೇಕಾಯಿತು.

ಶಮೀರ್ ಮನೆಯಿರುವುದು ಕುಳಾಲುವಿನ ಹಳ್ಳಿ ಪ್ರದೇಶ. ಅಲ್ಲಿಗೆ ಮೃತದೇಹವನ್ನು ಸಾಗಿಸಲು ದುರ್ಗಮವಿದ್ದ ದಾರಿಯನ್ನು ಸರಿಪಡಿಸಬೇಕಾದ ತುರ್ತು ಅಗತ್ಯವಿತ್ತು. ಆ ಸಂದರ್ಭ ನಮ್ಮೂರಿನ ಹಿರಿಯರಾದ ಸುಭಾಶ್ಚಂದ್ರ ಶೆಟ್ಟಿಎಂಬವರು, ‘‘ನೀವೆಲ್ಲರೂ ಪವಿತ್ರ ರಮಝಾನಿನ ವ್ರತ ಪಾಲಿಸುತ್ತಿದ್ದೀರಿ. ಆದ್ದರಿಂದ ದಾರಿ ಸರಿಪಡಿಸಲು ನೀವು ಯಾರು ಹಾರೆ -ಪಿಕ್ಕಾಸು ಕೈಗೆತ್ತಿಕೊಳ್ಳುವ ಅಗತ್ಯವಿಲ್ಲ. ನಾವೆಲ್ಲರೂ (ಹಿಂದೂ-ಕ್ರಿಶ್ಚಿಯನ್ನರು) ಈ ಕೆಲಸವನ್ನುಮಾಡುತ್ತೇವೆ’’ ಎಂದರು. ಈ ಸೌಹಾರ್ದ, ಮಾನವೀಯತೆಗೆ ಕಾರಣವಾಗುವಂತಹ ಜೀವನ ನಡೆಸಿದ ಶಮೀರ್ ಬದುಕು ಸಾರ್ಥಕ ಎಂದು ನನಗೆ ಆಗ ಅನಿಸಿತು.

ಸುಭಾಶ್ಚಂದ್ರ ಶೆಟ್ಟಿ ನುಡಿದಂತೆ ಊರವರ ಸಹಕಾರದಿಂದ ಮೃತದೇಹವನ್ನು ಸಾಗಿಸುವ ದುರ್ಗಮ ದಾರಿ, ರಾತ್ರಿ ಸಮಯದಲ್ಲಿ ಸುಗಮವಾಗಿತ್ತು. ದೂರಿಯುದ್ದಕ್ಕೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೌಹಾರ್ದ, ಭಾವೈಕ್ಯಗಳುಕೇವಲ ಭಾಷಣದಲ್ಲಿ, ಲೇಖನದಲ್ಲಿ ಮಾತ್ರ ಇವೆ ಎಂದು ನಾವು ಆತಂಕಪಡುತ್ತಿರುವಾಗ ಶಮೀರ್ ರಂತಹ ನಿಸ್ವಾರ್ಥ ಸಮಾಜ ಸೇವಕರು ತಮ್ಮ ಸೇವೆಯ ಮೂಲಕ ಈ ಮೌಲ್ಯಗಳನ್ನು ನಮ್ಮ ಸಮಾಜದಲ್ಲಿ ಜೀವಂತವಿಟ್ಟಿದ್ದಾರೆ ಎಂದು ಅಂದು ನನಗೆ ಮನದಟ್ಟಾಯಿತು. 

ಶಮೀರ್ ಅವರ ಪರೋಪಕಾರಿ ಜೀವನ ಇಂದಿನ ಯುವಕರಿಗೆ ಮಾದರಿಯಾಗಲಿ ಎಂದು ಪ್ರಾರ್ಥಿಸುತ್ತೇನೆ.

Writer - ಶೇಖ್ ಮೊಯ್ದಿನ್ ಕೆ.ಎಂ.

contributor

Editor - ಶೇಖ್ ಮೊಯ್ದಿನ್ ಕೆ.ಎಂ.

contributor

Similar News