ಗೃಹಸಾಲ, ವಾಹನ ಸಾಲ ಇನ್ನು ಅಗ್ಗ: ಸಚಿವೆ ನಿರ್ಮಲಾ ಸೀತಾರಾಮನ್

Update: 2019-08-23 13:23 GMT
Photo: ANI

ಹೊಸದಿಲ್ಲಿ: ದೇಶದ ಆರ್ಥಿಕ ಸ್ಥಿತಿ ಕಳವಳಕಾರಿಯಾಗಿರುವ ಹಿನ್ನೆಲೆಯಲ್ಲಿ ಇಂದು ಸರಣಿ ಘೋಷಣೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದು ಇದರಿಂದಾಗಿ, ಎಲ್ಲ ಗೃಹಸಾಲ ಹಾಗೂ ವಾಹನ ಸಾಲಗಳು ಅಗ್ಗವಾಗಲಿವೆ.

ರೆಪೊ ದರವನ್ನು ನೇರವಾಗಿ ಬಡ್ಡಿದರಕ್ಕೆ ಸಂಪರ್ಕಿಸಲಾಗುವುದು ಹಾಗೂ ಇದರಿಂದಾಗಿ ಗೃಹಸಾಲ, ವಾಹನ ಸಾಲ ಮತ್ತು ಇತರ ಚಿಲ್ಲರೆ ಸಾಲಗಳಿಗೆ ಇಎಂಐ ಕಡಿತವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆರ್ ಬಿ ಐ ಘೋಷಿಸಿದ ದರ ಕಡಿತವನ್ನು ಗ್ರಾಹಕರಿಗೆ ವರ್ಗಾಯಿಸಲು ಬ್ಯಾಂಕ್‍ಗಳು ಒಪ್ಪಿಕೊಂಡಿವೆ ಎಂದು ಹೇಳಿದರು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳಿಗೆ ನೆರವು ನೀಡುವುದು ಸಚಿವರ ಇನ್ನೊಂದು ಪ್ರಮುಖ ಘೋಷಣೆಯಾಗಿದೆ. ಬ್ಯಾಂಕ್‍ಗಳು ಅಧಿಕ ಸಾಲ ನೀಡಲು ಮತ್ತು ದ್ರವ್ಯತೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ಹೆಚ್ಚುವರಿ ನೆರವು ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

"ಹೆಚ್ಚುವರಿ ಸಾಲ ಮತ್ತು ದ್ರವ್ಯತೆಗಾಗಿ 70 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಎಂಸಿಎಲ್‍ಆರ್ ಇಳಿಕೆ ಮೂಲಕ ಬ್ಯಾಂಕ್‍ಗಳು ಈ ದರಕಡಿತದ ಪ್ರಯೋಜನ ವರ್ಗಾಯಿಸಲು ನಿರ್ಧರಿಸಿವೆ" ಎಂದು ವಿವರಿಸಿದರು.

ವಿದೇಶಿ ಸಾಂಸ್ಥಿಕ ಹೂಡಿಕೆ ಮೇಲೆ ಕಳೆದ ಬಜೆಟ್‍ನಲ್ಲಿ ಹೇರಿದ್ದ ಹೆಚ್ಚುವರಿ ಸರ್ಚಾರ್ಜ್ ಕೂಡಾ ಹಿಂಪಡೆಯಲಾಗಿದೆ. ಧೀರ್ಘ ಹಾಗೂ ಅಲ್ಪಾವಧಿ ಬಂಡವಾಳ ಲಾಭವನ್ನು ಈಕ್ವಿಟಿ ಷೇರುಗಳಾಗಿ ಪರಿವರ್ತಿಸುವಾಗ ವಿಧಿಸಲಾಗುತ್ತಿದ್ದ ಸರ್ಚಾರ್ಜ್ ಕೂಡಾ ಹಿಂಪಡೆಯಲಾಗಿದೆ. ಇದರೊಂದಿಗೆ ಬಜೆಟ್‍ಪೂರ್ವ ಸ್ಥಿತಿ ಮತ್ತೆ ಚಾಲನೆಗೆ ಬಂದಿದೆ ಎಂದು ಹೇಳಿದರು.

ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಬಾಕಿ ಇರುವ ಸರಕು ಮತ್ತು ಸೇವಾ ತೆರಿಗೆ ಮರುಪಾವತಿಯನ್ನು 30 ದಿನಗಳ ಒಳಗಾಗಿ ಮಾಡಲಾಗುತ್ತದೆ ಹಾಗೂ ಇನ್ನು ಮುಂದೆ 60 ದಿನಗಳ ಒಳಗಾಗಿ ಮರುಪಾವತಿ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News