ತೆಲಂಗಾಣ: ದೇವಸ್ಥಾನದಲ್ಲಿ ಗರ್ಭಿಣಿ ದಲಿತ ಗ್ರಾ.ಪಂ.ಅಧ್ಯಕ್ಷೆ ಮೇಲೆ ಹಲ್ಲೆ

Update: 2019-08-23 13:59 GMT

 ಹೈದರಾಬಾದ್,ಆ.23: ಬೋನಾಲು ಉತ್ಸವದ ಸಂದರ್ಭದಲ್ಲಿ ಗ್ರಾಮದೇವತೆಗೆ ತೆಂಗಿನಕಾಯಿ ಅರ್ಪಿಸಲು ತೆರಳಿದ್ದ ಸ್ಥಳೀಯ ಗ್ರಾಮ ಪಂಚಾಯತ್‌ನ ಅಧ್ಯಕ್ಷೆಯಾಗಿರುವ ದಲಿತ ಸಮುದಾಯಕ್ಕೆ ಸೇರಿದ ಗರ್ಭಿಣಿ ಮತ್ತು ಆಕೆಯ ಪತಿಯ ಮೇಲೆ ಮೇಲ್ಜಾತಿಗೆ ಸೇರಿದ ರಾಜಕೀಯ ವಿರೋಧಿಗಳು ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ನಂ ಮಂಡಲ ವ್ಯಾಪ್ತಿಯ ಥುರ್ಕಾಗುಡಾ ಗ್ರಾಮದಲ್ಲಿ ನಡೆದಿದೆ.

ಕಾಂಗ್ರೆಸ್‌ಗೆ ಸೇರಿದ ಮಾಜಿ ಗ್ರಾ.ಪಂ.ಅಧ್ಯಕ್ಷ ಪ್ರಭಾಕರ ರೆಡ್ಡಿಯ ಬಣ ಪಂಚಾಯತ್ ಚುನಾವಣೆಯಲ್ಲಿ ಸೋತಾಗಿನಿಂದ ಆತ ಮತ್ತು ಆತನ ಕುಟುಂಬದವರು ತಮ್ಮ ಮೇಲೆ ಹಲ್ಲೆ ನಡೆಸಲು ಮತ್ತು ಅವಮಾನಿಸಲು ಅವಕಾಶಕ್ಕಾಗಿ ಕಾಯುತ್ತಿದ್ದರು ಎಂದು ಟಿಆರ್‌ಎಸ್ ಪಕ್ಷದ ಸದಸ್ಯೆ,ಮಾದಿಗ ಸಮುದಾಯಕ್ಕೆ ಸೇರಿದ ಗ್ರಾ.ಪಂ.ಅಧ್ಯಕ್ಷೆ ಪವಿತ್ರಾ ಸುದ್ದಿಗಾರರಿಗೆ ತಿಳಿಸಿದರು.

 ಪ್ರತಿ ವರ್ಷ ಗ್ರಾಮದ ಉತ್ಸವದ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು ತೆಂಗಿನ ಕಾಯಿಯನ್ನು ಗ್ರಾಮ ದೇವತೆಗೆ ಸಲ್ಲಿಸುವುದು ಇಲ್ಲಿಯ ಸಂಪ್ರದಾಯವಾಗಿದೆ. ಇದಕ್ಕನುಗುಣವಾಗಿ ಆ.18ರಂದು ಪವಿತ್ರಾ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅವರು ತೆಂಗಿನ ಕಾಯಿಯನ್ನು ಗ್ರಾಮ ದೇವತೆಗೆ ಸಲ್ಲಿಸುವುದನ್ನು ಪ್ರಭಾಕರ ರೆಡ್ಡಿ ಮತ್ತು ಇತರರು ತಡೆದಿದ್ದರು. ಪವಿತ್ರಾರ ಪತಿ ಕಥುಲ ಕುಮಾರ ಮಧ್ಯೆಪ್ರವೇಶಿಸಿದಾಗ ಜಾತಿನಿಂದನೆಗೈದ ಆರೋಪಿಗಳು ಆಕೆಯನ್ನು ಪಕ್ಕಕ್ಕೆ ತಳ್ಳಿ,ಕುಮಾರ ಮೇಲೆ ಹಲ್ಲೆ ನಡೆಸಿದ್ದರು.

ಪವಿತ್ರಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚೇತರಿಸಿಕೊಂಡ ಬಳಿಕ ಬಿಡುಗಡೆಗೊಂಡಿದ್ದಾರೆ.

ಜಾತಿ ನಿಂದನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಕುಮಾರ ಇಬ್ರಾಹಿಂಪಟ್ನಂ ಠಾಣೆಯಲ್ಲಿ ಪ್ರಭಾಕರ ರೆಡ್ಡಿ ಮತ್ತು ಇತರ ಏಳು ಜನರ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

 ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಐಪಿಸಿಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದು,ತಲೆಮರೆಸಿಕೊಂಡಿರುವ ಇತರರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News