ರಾಮಾಯಣ ಸರ್ಕ್ಯೂಟ್ ಟೂರ್‌ಗಳ ಪುನರಾರಂಭಕ್ಕೆ ರೈಲ್ವೆ ಇಲಾಖೆ ನಿರ್ಧಾರ

Update: 2019-08-23 14:02 GMT

 ಹೊಸದಿಲ್ಲಿ,ಆ.23: ಕಳೆದ ವರ್ಷ ಯಶಸ್ವಿಯಾಗಿದ್ದ,ಪ್ರವಾಸಿಗಳಿಗೆ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳ ದರ್ಶನ ಮಾಡಿಸುವ ರಾಮಾಯಣ ಸರ್ಕ್ಯೂಟ್ ಟೂರ್‌ಗಳನ್ನು ಭಾರತೀಯ ರೈಲ್ವೆಯು ಪುನರಾರಂಭಿಸಲಿದೆ.

ರೈಲು ಭಾರತ ಮತ್ತು ಶ್ರೀಲಂಕಾದಲ್ಲಿ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಈ ರೈಲು ಸಂಚರಿಸಲಿದೆ. ಪ್ರವಾಸಿಗರನ್ನು ಭಾರತದಲ್ಲಿಯ ತಾಣಗಳಿಗೆ ರೈಲಿನ ಮೂಲಕ ಮತ್ತು ಶ್ರೀಲಂಕಾದಲ್ಲಿಯ ತಾಣಗಳಿಗೆ ಚೆನ್ನೈನಿಂದ ವಿಮಾನದ ಮೂಲಕ ಕರೆದೊಯ್ಯಲಾಗುವುದು.

ಐಆರ್‌ಸಿಟಿಸಿ ಕಳೆದ ವರ್ಷ ಇಂತಹ ನಾಲ್ಕು ವಿಶೇಷ ರೈಲು ಯಾತ್ರೆಗಳನ್ನು ಆಯೋಜಿಸಿತ್ತು. ಈ ವರ್ಷದ ನವೆಂಬರ್‌ನಲ್ಲಿ ಇಂತಹ ಎರಡು ಪ್ರವಾಸಗಳನ್ನು ಏರ್ಪಡಿಸಲಾಗಿದ್ದು,ಆಸಕ್ತ ಪ್ರವಾಸಿಗರು ಇದರ ಲಾಭವನ್ನ್ನು, ಪಡೆಯಬಹುದಾಗಿದೆ ಎಂದು ಭಾರತೀಯ ರೈಲ್ವೆಯು ಶುಕ್ರವಾರ ತಿಳಿಸಿದೆ.

16 ಹಗಲು ಮತ್ತು 17 ರಾತ್ರಿಗಳ,ಭಾರತೀಯ ಪ್ರದೇಶದಲ್ಲಿಯ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 16,065 ರೂ.ಗಳ ಪ್ರಯಾಣ ಶುಲ್ಕವನ್ನು ನಿಗದಿಗೊಳಿಸಲಾಗಿದೆ. ಶ್ರೀಲಂಕಾಕ್ಕೆ ಭೇಟಿ ನೀಡಲು ಬಯಸುವವರು ತಲಾ 36,950 ರೂ.ಗಳನ್ನು ಪಾವತಿಸಬೇಕಾಗುತ್ತದೆ.

 ‘ಶ್ರೀ ರಾಮಾಯಣ ಯಾತ್ರಾ’ ಹೆಸರಿನ ಇಂತಹ ಮೊದಲ ರೈಲು ನ.3ರಂದು ಜೈಪುರದಿಂದ ನಿರ್ಗಮಿಸಲಿದ್ದು,ದಿಲ್ಲಿ ಮೂಲಕ ಸಂಚರಿಸಲಿದೆ. ಪ್ರಯಾಣಿಕರಿಗೆ ಶ್ರೀಲಂಕಾ ಪ್ರವಾಸ ಐಚ್ಛಿಕವಾಗಿರುತ್ತದೆ. ‘ರಾಮಾಯಣ ಎಕ್ಸ್‌ಪ್ರೆಸ್’ ಎಂಬ ಇನ್ನೊಂದು ರೈಲು ನ.18ರಂದು ಮಧ್ಯಪ್ರದೇಶದ ಇಂದೋರ್ ನಿಂದ ನಿರ್ಗಮಿಸಲಿದ್ದು,ವಾರಣಾಸಿಯ ಮೂಲಕ ಸಂಚರಿಸಲಿದೆ. ಮುಂಬರುವ ತಿಂಗಳುಗಳಲ್ಲಿ ಮದುರೈನಿಂದಲೂ ಇಂತಹ ಇನ್ನೊಂದು ರೈಲು ಹೊರಡುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News