ಅಸಂಸದೀಯ ಭಾಷೆಯ ಬಳಕೆಗಾಗಿ ದಿಲ್ಲಿ ಬಿಜೆಪಿ ಶಾಸಕ ಗುಪ್ತಾ ಅಮಾನತು

Update: 2019-08-23 14:19 GMT

ಹೊಸದಿಲ್ಲಿ,ಆ.23: ಸದನದಲ್ಲಿ ಅಸಂಸದೀಯ ಭಾಷೆಯನ್ನು ಬಳಸಿದ್ದಕ್ಕಾಗಿ ಬಿಜೆಪಿ ಶಾಸಕ ಹಾಗೂ ವಿಪಕ್ಷ ನಾಯಕ ವಿಜೇಂದರ್ ಗುಪ್ತಾ ಅವರನ್ನು ದಿಲ್ಲಿ ವಿಧಾನಸಭಾ ಸ್ಪೀಕರ್ ರಾಮನಿವಾಸ ಗೋಯೆಲ್ ಅವರು ಶುಕ್ರವಾರ ಎರಡು ದಿನಗಳ ಅವಧಿಗೆ ಅಮಾನತುಗೊಳಿಸಿದ್ದಾರೆ. ಈ ಅವಧಿಯಲ್ಲಿ ಗುಪ್ತಾ ಸದನ ಕಲಾಪಗಳಲ್ಲಿ ಭಾಗಿಯಾಗುವಂತಿಲ್ಲ. ಸದನದ ಕಲಾಪಗಳಿಗೆ ಅಡಚಣೆಯನ್ನುಂಟು ಮಾಡಿದ್ದಕ್ಕಾಗಿ ಇನ್ನೋರ್ವ ಬಿಜೆಪಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಅವರನ್ನು ಸ್ಪೀಕರ್ ಮಾರ್ಷಲ್‌ಗಳ ಮೂಲಕ ಸದನದಿಂದ ಹೊರಕ್ಕೆ ಹಾಕಿಸಿದರು.

ಅಮಾನತಿನ ಬಳಿಕ ಗುಪ್ತಾ ಅವರು ವಿಧಾನಸಭೆಯಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಚೇರಿಯೆದುರು ಧರಣಿ ನಡೆಸಿದರು.

ದಿಲ್ಲಿಯ ತುಘ್ಲಕಾಬಾದ್ ಪ್ರದೇಶದಲ್ಲಿಯ ರವಿದಾಸ ಮಂದಿರ ನೆಲಸಮದ ವಿರುದ್ಧ ಆಪ್ ಶಾಸಕರು ನಿರಂತರ ಪ್ರತಿಭಟನೆ ನಡೆಸುತ್ತಿರುವುದನ್ನು ಗುರುವಾರ ಗುಪ್ತಾ ಸದನದಲ್ಲಿ ಆಕ್ಷೇಪಿಸಿದ್ದರು. ಈ ಸಂದರ್ಭ ಅವರು ಬಳಸಿದ್ದ ನಿರ್ದಿಷ್ಟ ಹಿಂದಿ ಶಬ್ದವು ಆಪ್ ಶಾಸಕರನ್ನು ಕೆರಳಿಸಿದ್ದು,ಸದನದಲ್ಲಿ ಕೋಲಾಹಲವನ್ನು ಇನ್ನಷ್ಟು ಹೆಚ್ಚಿಸಿತ್ತು. ಗುಪ್ತಾ ಕ್ಷಮೆ ಯಾಚಿಸಬೇಕೆಂದು ಆಪ್ ಪಟ್ಟು ಹಿಡಿದಿತ್ತು. ಸ್ಪೀಕರ್ ಬಳಿಕ ಈ ಶಬ್ದವನ್ನು ಕಡತದಿಂದ ಅಳಿಸಿಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News