ಎಸ್‌ಬಿಐ ನಿರಖು ಠೇವಣಿಗಳಿಗೆ ಬಡ್ಡಿದರ ಶೇ.0.5ರವರೆಗೆ ಕಡಿತ

Update: 2019-08-23 14:30 GMT

ಹೊಸದಿಲ್ಲಿ,ಆ.23: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ವಿವಿಧ ಅವಧಿಗಳ ನಿರಖು ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಶುಕ್ರವಾರ ಶೇ.0.5ರವರೆಗೆ ಕಡಿತಗೊಳಿಸಿದೆ. ಇದರಿಂದ ಠೇವಣಿದಾರರು ಇನ್ನು ಮುಂದೆ ತಮ್ಮ ಹೂಡಿಕೆಗಳಿಗೆ ಕಡಿಮೆ ಪ್ರತಿಫಲವನ್ನು ಪಡೆಯಲಿದ್ದಾರೆ.

ಬಡ್ಡಿದರಗಳು ಕಡಿಮೆಯಾಗುತ್ತಿರುವ ಮತ್ತು ಸಾಲಕ್ಕೆ ಹೆಚ್ಚು ಬೇಡಿಕೆಗಳಿಲ್ಲದಿರುವ ಹಿನ್ನೆಲೆಯಲ್ಲಿ ಎಸ್‌ಬಿಐ ಸಾವಧಿ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ನೂತನ ಬಡ್ಡಿದರಗಳು 2019,ಆ.26ರಿಂದ ಜಾರಿಗೊಳ್ಳಲಿವೆ ಎಂದು ಬ್ಯಾಂಕು ಹೇಳಿಕೆಯಲ್ಲಿ ತಿಳಿಸಿದೆ. ಇತರ ಬ್ಯಾಂಕುಗಳೂ ಎಸ್‌ಬಿಐ ಕ್ರಮವನ್ನು ಅನುಸರಿಸುವ ನಿರೀಕ್ಷೆಯಿದೆ.

ಪರಿಷ್ಕರಣೆಯಿಂದಾಗಿ ಇನ್ನು ಮುಂದೆ 7ರಿಂದ 45 ದಿನಗಳ ಅವಧಿಗೆ ಶೇ.4.5,46ರಿಂದ 179 ದಿನಗಳ ಅವಧಿಗೆ ಶೇ.5.5,180 ದಿನಗಳಿಂದ ಒಂದು ವರ್ಷಕ್ಕೂ ಕಡಿಮೆ ಅವಧಿಗೆ ಶೇ.6,1ರಿಂದ 2 ವರ್ಷ ಅವಧಿಗೆ ಶೇ.6.70 ಮತ್ತು 5ರಿಂದ 10 ವರ್ಷಗಳ ಅವಧಿಗೆ ಶೇ.6.25 ಬಡ್ಡಿ ದೊರೆಯಲಿದೆ.

 ಆರ್‌ಬಿಐ ರೆಪೊ ದರಗಳನ್ನು ಕಡಿತಗೊಳಿಸಿದ್ದರೂ ಉಳಿತಾಯ ಖಾತೆ ಠೇವಣಿದಾರರ ಹಿತರಕ್ಷಣೆಗಾಗಿ ಇಂತಹ ಖಾತೆಗಳಲ್ಲಿ ಒಂದು ಲ.ರೂ.ವರೆಗಿನ ಠೇವಣಿಗಳ ಮೇಲಿನ ಶೇ.3.5 ಮತ್ತು ಒಂದು ಲಕ್ಷ ರೂ.ಗಿಂತ ಹೆಚ್ಚಿನ ಠೇವಣಿಗಳ ಮೇಲಿನ ಶೇ.3 ಬಡ್ಡಿದರಗಳಲ್ಲಿ ಬದಲಾವಣೆಗಳನ್ನು ಮಾಡಿಲ್ಲ ಎಂದೂ ಬ್ಯಾಂಕು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News