×
Ad

ಎನ್‌ಡಿಟಿಎಲ್‌ನ ಮಾನ್ಯತೆ ಅಮಾನತುಗೊಳಿಸಿದ ವಾಡಾ

Update: 2019-08-23 20:09 IST

ಹೊಸದಿಲ್ಲಿ,ಆ.23: ವಿಶ್ವ ಉದ್ದೀಪನ ಮದ್ದು ಸೇವನೆ ನಿಗ್ರಹ ಸಂಸ್ಥೆ (ವಾಡಾ)ಯು ಭಾರತದ ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯ (ಎನ್‌ಡಿಟಿಎಲ್)ದ ಮಾನ್ಯತೆಯನ್ನು ಆರು ತಿಂಗಳ ಅವಧಿಗೆ ರದ್ದುಗೊಳಿಸಿದೆ. ಇದರಿಂದಾಗಿ ದೇಶದ ಉದ್ದೀಪನ ಮದ್ದು ನಿಗ್ರಹ ಕಾರ್ಯಕ್ರಮಕ್ಕೆ ಭಾರೀ ಹಿನ್ನಡೆಯಾಗಿದ್ದು,ಇದರ ವೆಚ್ಚ ಏರಿಕೆಯಾಗಲಿದೆ.

ಅಮಾನತು ಆದೇಶವು ಆ.20ರಿಂದಲೇ ಜಾರಿಗೊಂಡಿದ್ದು,2008ರಲ್ಲಿ ವಾಡಾ ಮಾನ್ಯತೆಯನ್ನು ಪಡೆದಿದ್ದ ಎನ್‌ಡಿಟಿಎಲ್‌ಗೆ ಈಗ ಕ್ರೀಡಾಳುಗಳ ರಕ್ತ ಮತ್ತು ಮೂತ್ರದ ಮಾದರಿಗಳ ಪರೀಕ್ಷೆ ನಡೆಸುವ ಅಧಿಕಾರವಿಲ್ಲ. ಟೋಕಿಯೊ ಒಲಿಂಪಿಕ್ಸ್‌ಗೆ ಒಂದು ವರ್ಷಕ್ಕೂ ಕಡಿಮೆ ಸಮಯಾವಕಾಶವಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಭಾರತಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.

ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಸಂಸ್ಥೆ (ನಾಡಾ) ಈಗಲೂ ರಕ್ತ ಮತ್ತು ಮೂತ್ರದ ಸ್ಯಾಂಪಲ್‌ಗಳನ್ನು ಸಂಗ್ರಹಿಸಬಹುದು. ಆದರೆ ಅವುಗಳನ್ನು ಭಾರತದಿಂದ ಹೊರಗಿನ ವಾಡಾ ಮಾನ್ಯತೆ ಪಡೆದಿರುವ ಪ್ರಯೋಗಶಾಲೆಗಳಲ್ಲಿ ಪರೀಕ್ಷೆ ಮಾಡಿಸಬೇಕಾಗುತ್ತದೆ.

ವಾಡಾ ತಂಡವು ಎನ್‌ಡಿಟಿಎಲ್‌ಗೆ ಭೇಟಿ ನೀಡಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಅದು ಪ್ರಯೋಗಾಲಯ ಗಳಿಗಾಗಿರುವ ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎನ್ನುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅದರ ಮಾನ್ಯತೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ವಾಡಾ ಪ್ರಕಟಣೆಯಲ್ಲಿ ತಿಳಿಸಿದೆ.

ಎನ್‌ಡಿಟಿಎಲ್ ಇದರ ವಿರುದ್ಧ 21 ದಿನಗಳಲ್ಲಿ ಸ್ವಿಟ್ಝರ್‌ಲ್ಯಾಂಡ್‌ನ ಲೌಸಾನೆಯಲ್ಲಿರುವ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್‌ಗೆ ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ. ಎನ್‌ಡಿಟಿಎಲ್ ನಾಡಾದಿಂದ ಪ್ರತ್ಯೇಕ ಸಂಸ್ಥೆಯಾಗಿದೆ. ಸ್ಯಾಂಪಲ್‌ಗಳ ಪರೀಕ್ಷೆಯಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ. ನಾವು ಸ್ಯಾಂಪಲ್‌ಗಳನ್ನಷ್ಟೇ ಸಂಗ್ರಹಿಸುತ್ತೇವೆ ’ ಎಂದು ನಾಡಾ ಮಹಾ ನಿರ್ದೇಶಕ ನವೀನ್ ಅಗರವಾಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News