ರಾಜೌರಿ: ಪಾಕ್ ಸೇನೆಯ ಗುಂಡಿನ ದಾಳಿಗೆ ಯೋಧ ಹುತಾತ್ಮ

Update: 2019-08-23 14:49 GMT

ಜಮ್ಮು, ಆ. 23: ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಗೆ ಯೋಧ ಓರ್ವ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧನನ್ನು ನಾಯ್ಕ್ ರಜೀಬ್ ಥಾಪಾ (34) ಎಂದು ಗುರುತಿಸಲಾಗಿದೆ. ಇದರೊಂದಿಗೆ ಕಳೆದ ನಾಲ್ಕು ವಾರಗಳಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಗೆ ಮೃತಪಟ್ಟ ಯೋಧರ ಸಂಖ್ಯೆ 3ಕ್ಕೆ ತಲುಪಿದೆ.

 ನೌಶೇರಾ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿತು. ಭಾರತದ ಸೇನೆ ಸಮರ್ಥ ಪ್ರತಿ ದಾಳಿ ನಡೆಸಿತು. ಈ ಗುಂಡಿನ ಚಕಮಕಿಯಲ್ಲಿ ನಾಯ್ಕ್ ಥಾಪಾ ಹುತಾತ್ಮರಾದರು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಹೇಳಿದ್ದಾರೆ. ಥಾಪಾ ಪಶ್ಚಿಮಬಂಗಾಳದ ಜಲ್‌ಪಾಗುರಿಯ ಮೆಕ್‌ಪಾರಾ ಗ್ರಾಮದ ನಿವಾಸಿ. ಅವರು ಪತ್ನಿ ಖುಷ್ಬೂ ಮಾಂಗರ್ ಥಾಪಾ ಅವರನ್ನು ಅಗಲಿದ್ದಾರೆ ಎಂದು ವಕ್ತಾರ ತಿಳಿಸಿದ್ದಾರೆ.

 ಗುಂಡಿನ ಚಕಮಕಿಯಿಂದ ಪಾಕಿಸ್ತಾನದ ಸೇನಾ ಠಾಣೆಯಲ್ಲಿ ಗಂಭೀರ ಹಾನಿ ಉಂಟಾಗಿದೆ. ಪಾಕಿಸ್ತಾನದ ಹಲವು ಯೋಧರಿಗೆ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ. ಗಡಿಯಾದ್ಯಂತ ಪಾಕಿಸ್ತಾನ ಸೇನೆ ಮುಂಜಾನೆ ಅಪ್ರಚೋದಿತ ದಾಳಿ ನಡೆಸಿದ ಸಂದರ್ಭ ನೌಶೇರಾದ ಕಾಲ್ಸಿಯಾ ಗ್ರಾಮದ ಮುಂಚೂಣಿ ಠಾಣೆಯಲ್ಲಿ ಯೋಧರು ಗಸ್ತು ನಡೆಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News