ವಿಶೇಷ ನ್ಯಾಯಾಧೀಶರ ಸೇವಾವಧಿ ವಿಸ್ತರಣೆ ಆದೇಶ ಜಾರಿಗೆ ಸುಪ್ರೀಂ ಗಡುವು

Update: 2019-08-23 17:04 GMT

ಹೊಸದಿಲ್ಲಿ,ಆ.23: 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರ ಸೇವಾವಧಿಯನ್ನು ವಿಸ್ತರಿಸುವ ಕುರಿತ ಆದೇಶವನ್ನು ಎರಡು ವಾರಗಳೊಳಗೆ ಜಾರಿ ಮಾಡುವಂತೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದೆ. ಜುಲೈ 27ರಂದು ವಿಶೇಷ ನ್ಯಾಯಾಧೀಶರು ಬರೆದ ಪತ್ರದಲ್ಲಿ ತನಗೆ ಭದ್ರತೆಯನ್ನು ಒದಗಿಸುವುದು ಸೇರಿದಂತೆ ಐದು ಮನವಿಗಳನ್ನು ಮಾಡಿದ್ದರು ಎಂದು ನ್ಯಾಯಾಧೀಶರಾದ ಆರ್.ಎಫ್ ನರಿಮನ್ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ ತಿಳಿಸಿದೆ. ಈ ಎಲ್ಲ ಮನವಿಗಳು ಸಮರ್ಥನೀಯವಾಗಿರುವಂತೆ ಕಾಣುತ್ತಿವೆ. ಹಾಗಾಗಿ ಅವುಗಳನ್ನು ಎರಡು ವಾರಗಳ ಒಳಗೆ ಜಾರಿ ಮಾಡುವಂತೆ ರಾಜ್ಯದ ಪರ ವಾದಿಸುತ್ತಿರುವ ವಕೀಲ ಐಶ್ವರ್ಯ ಭಾಟಿ ಅವರಿಗೆ ಪೀಠವು ತಿಳಿಸಿದೆ.

ಶ್ರೇಷ್ಟ ನ್ಯಾಯಾಲಯ ಜುಲೈ 19ರಂದು ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಹಾಗೂ ತೀರ್ಪು ಪ್ರಕಟಿಸುವವರೆಗೆ ವಿಶೇಷ ನ್ಯಾಯಾದೀಶರ ಸೇವಾವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿತ್ತು. ಆದರೆ ರಾಜ್ಯ ಸರಕಾರ ಇನ್ನಷ್ಟೇ ಈ ಆದೇಶವನ್ನು ಜಾರಿ ಮಾಡಬೇಕಿದೆ. ಪ್ರಕರಣದ ತೀರ್ಪನ್ನು ಒಂಬತ್ತು ತಿಂಗಳೊಳಗಾಗಿ ಪ್ರಕಟಿಸುವಂತೆ ವಿಶೇಷ ನ್ಯಾಯಾಧೀಶರಿಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News