ಚಿದಂಬರಂ ಪ್ರಕರಣ; ಉಚ್ಚ ನ್ಯಾಯಾಲಯದ ತೀರ್ಪು ಈ.ಡಿ. ದಾಖಲೆಯಿಂದ ಕಟ್ ಪೇಸ್ಟ್ ಮಾಡಲಾಗಿದೆ: ಸಿಬಲ್

Update: 2019-08-23 16:36 GMT

ಹೊಸದಿಲ್ಲಿ,ಆ.23: ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರಿಗೆ ಜಾಮೀನು ನಿರಾಕರಿಸಿ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದಾಖಲೆಯಿಂದ ನಕಲು (ಕಟ್ ಪೇಸ್ಟ್) ಮಾಡಲಾಗಿದೆ ಎಂದು ಚಿದಂಬರಂ ಪರ ವಕೀಲ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ನ್ಯಾಯಾಲಯವು ಚಿದಂಬರಂ ಅವರಿಗೆ ಜಾಮೀನು ನಿರಾಕರಿಸಲು ಇಡಿ ವಕೀಲರು ಸಲ್ಲಿಸಿದ ದಾಖಲೆಯ ಅಂಶಗಳನ್ನು ನಕಲು ಮಾಡುವುದಾದರೆ ಜಾಮೀನು ಸಿಗುವುದಾದರೂ ಹೇಗೆ ಎಂದು ಸಿಬಲ್ ನ್ಯಾಯಾಧೀಶರಾದ ಭಾನುಮತಿ ಮತ್ತು ಎ.ಎಸ್ ಭೋಪಣ್ಣ ಅವರ ಪೀಠಕ್ಕೆ ತಿಳಿಸಿದ್ದಾರೆ.

ಐಎನ್‌ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ದಾಖಲಿಸಿದ್ದ ಎರಡು ಪ್ರಕರಣಗಳಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸುನೀಲ್ ಗೌರ್ ಕೇವಲ ಒಂದು ಆದೇಶದಲ್ಲೇ ಚಿದಂಬರಂ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದರು. ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಅಧಿಕಾರಿಗಳು ಮುಂದಿನ ವಾರ ತನ್ನನ್ನು ಬಂಧಿಸಬಹುದು ಎಂದು ಚಿದಂಬರಂ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸರ್ವೊಚ್ಚ ನ್ಯಾಯಾಲಯ ಶುಕ್ರವಾರ ನಡೆಸಿತು. ಪ್ರತಿಷ್ಠಿತ ವಂಚಿತರು ಭಾಗಿಯಾಗಿರುವ ವಂಚನೆ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವುದನ್ನು ಸ್ಥಗಿತಗೊಳಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ತಿಳಿದ್ದಾರೆ. ಹಾಗಾದರೆ ನನ್ನ ವ್ಯಕ್ತಿತ್ವದ ಆಧಾರದಲ್ಲಿ ನನ್ನ ಹಕ್ಕೂ ಬದಲಾಗುತ್ತದೆಯೇ ಎಂದು ಚಿದಂಬರಂ ಪರ ವಾದಿಸುತ್ತಿರುವ ಇನ್ನೋರ್ವ ವಕೀಲ ಅಭಿಷೇಕ್ ಸಿಂಘ್ವಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News