ಬಾಲಕೋಟ್ ದಾಳಿ ವೇಳೆ ಭಾರತೀಯ ಕ್ಷಿಪಣಿಯಿಂದಲೇ ವಾಯುಸೇನಾ ಹೆಲಿಕಾಪ್ಟರ್ ಪತನ : ತನಿಖಾ ವರದಿ

Update: 2019-08-23 15:56 GMT

ಹೊಸದಿಲ್ಲಿ, ಆ. 26: ಭಾರತ ಹಾಗೂ ಪಾಕಿಸ್ತಾನ ವಾಯು ಪಡೆಗಳು ವೈಮಾನಿಕ ಸಮರದಲ್ಲಿ ತೊಡಗಿರುವ ಸಂದರ್ಭ ಶ್ರೀನಗರದಲ್ಲಿ ಪೆಬ್ರವರಿ 27ರಂದು ತಮ್ಮದೇ ಹೆಲಿಕಾಪ್ಟರ್ ಅನ್ನು ಹೊಡೆದುರಳಿಸಿದ ಪ್ರಕರಣದಲ್ಲಿ ಐಎಎಫ್‌ನ ಐವರು ಅಧಿಕಾರಿಗಳು ದೋಷಿಗಳು ಎಂದು ಭಾರತೀಯ ವಾಯು ಪಡೆಯ ತನಿಖೆ ಹೇಳಿದೆ.

 ಪಾಕಿಸ್ತಾನದ ಭಯೋತ್ಪಾದಕರ ಶಿಬಿರಗಳನ್ನು ಗುರಿಯಾಗಿರಿಸಿ ಫೆಬ್ರವರಿ 26ರಂದು ಬಾಲಕೋಟ್ ವೈಮಾನಿಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತೀಯ ವಾಯು ಪಡೆ ಕಟ್ಟೆಚ್ಚರ ವಹಿಸಿದ್ದ ಸಂದರ್ಭ ಐಎಎಫ್‌ನ ಹೆಲಿಕಾಪ್ಟರ್ ಅನ್ನು ಐಎಎಫ್‌ನ ಕ್ಷಿಪಣಿ ಹೊಡೆದುರುಳಿಸಿತ್ತು. ಹೆಲಿಕಾಪ್ಟರ್ ಬುಡ್ಗಾಂವ್ ಸಮೀಪ ಪತನಗೊಂಡಿತ್ತು. ಈ ಘಟನೆಯಲ್ಲಿ ಭಾರತೀಯ ವಾಯು ಪಡೆಯ 6 ಮಂದಿ ಸಿಬ್ಬಂದಿ ಮೃತಪಟ್ಟಿದ್ದರು.

‘‘ತನಿಖಾ ನ್ಯಾಯಾಲಯದ ವಿಚಾರಣೆಯಲ್ಲಿ ಐವರು ಅಧಿಕಾರಿಗಳು ತಪ್ಪೆಸಗಿದ್ದಾರೆ ಎಂಬುದು ಸಾಬೀತಾಗಿದೆ. ಮುಂದಿನ ಕ್ರಮಕ್ಕೆ ವರದಿಯನ್ನು ಭಾರತೀಯ ವಾಯು ಪಡೆಯ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗಿದೆ’’ ಎಂದು ಸರಕಾರದ ಮೂಲಗಳು ತಿಳಿಸಿವೆ. ಅಧಿಕಾರಿಗಳು ನಿರ್ಲಕ್ಷ ತೋರುವ ಮೂಲಕ ತಪ್ಪೆಸಗಿರುವುದು ಸಾಬೀತಾಗಿದೆ. ಓರ್ವ ಗ್ರೂಪ್ ಕ್ಯಾಪ್ಟೆನ್, ಇಬ್ಬರು ವಿಂಗ್ ಕಮಾಂಡರ್‌ಗಳು ಹಾಗೂ ಇಬ್ಬರು ಫ್ಲೈಟ್ ಲೆಫ್ಟಿನೆಂಟ್‌ಗಳು ನಿಬಂಧನೆಗಳನ್ನು ಅನುಸರಿಸದೇ ಇರುವುದರಿಂದ ಈ ದುರಂತ ಸಂಭವಿಸಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ನಡೆಯುವ ಸಂದರ್ಭ ಏರ್ ಮಾರ್ಷಲ್ ಪಶ್ಚಿಮ ಕಮಾಂಡ್‌ನ ವರಿಷ್ಠರಾಗಿದ್ದರು. ಜಮ್ಮು ಕಾಶ್ಮೀರದ ಆಕಾಶದಲ್ಲಿ ಭಾರತ ಹಾಗೂ ಪಾಕಿಸ್ಥಾನದ ಯುದ್ಧ ವಿಮಾನಗಳು ವೈಮಾನಿಕ ಸಮರದಲ್ಲಿ ತೊಡಗಿರುವ ಸಂದರ್ಭ ಐಎಎಫ್‌ನ ಹೆಲಿಕಾಪ್ಟರ್ ಅನ್ನು ಐಎಎಫ್ ಕ್ಷಿಪಣಿ ಮೂಲಕ ಹೊಡೆದುರುಳಿಸಲಾಗಿತ್ತು.

ಬಾಲಕೋಟ್ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಯುದ್ಧ ವಿಮಾನ ಆರಂಭಿಸಿದ ಪ್ರತಿ ದಾಳಿಯ ಪರಿಣಾಮ ವೈಮಾನಿಕ ಸಮರ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News