ಬಿಹಾರದ ತಲೆಮರೆಸಿಕೊಂಡಿದ್ದ ಶಾಸಕ ನ್ಯಾಯಾಲಯಕ್ಕೆ ಶರಣು

Update: 2019-08-23 16:29 GMT

ಪಾಟ್ನಾ,ಆ.23: ತನ್ನ ನಿವಾಸದಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮೊಕಮದ ಸ್ವತಂತ್ರ ಶಾಸಕ ಅನಂತ್ ಸಿಂಗ್ ಶುಕ್ರವಾರ ದಿಲ್ಲಿಯ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಆಗಸ್ಟ್ 16ರಂದು ಪಾಟ್ನಾ ಜಿಲ್ಲೆಯ ಬರ ಪೊಲೀಸ್ ಠಾಣಾ ವ್ಯಾಪ್ತಿಯ ಲದ್ಮದಲ್ಲಿರುವ ಅನಂತ್ ಸಿಂಗ್ ಅವರ ಪೂರ್ವಜರ ಮನೆಯಲ್ಲಿ ಎಕೆ 47, 26 ಕಾಟ್ರಿಜ್‌ಗಳು ಮತ್ತು ಎರಡು ಬಾಂಬ್‌ಗಳು ಪತ್ತೆಯಾದ ನಂತರ ಆಗಸ್ಟ್ 17ರಿಂದ ಸಿಂಗ್ ತನ್ನ ಅಧಿಕೃತ ನಿವಾಸದಿಂದ ನಾಪತ್ತೆಯಾಗಿದ್ದರು. ಸಿಂಗ್ ವಿರುದ್ಧ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ ಮತ್ತು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಪಾಟ್ನಾ ನ್ಯಾಯಾಲಯ ಸಿಂಗ್ ಅವರನ್ನು ತಲೆಮರೆಸಿಕೊಂಡ ಅಪರಾಧಿ ಎಂದು ಘೋಷಿಸಿತ್ತು ಹಾಗೂ ಪೊಲೀಸರು ಅವರ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ಸಿಂಗ್ ಬಂಧನಕ್ಕೆ ಪೊಲೀಸ್ ವರಿಷ್ಟಾಧಿಕಾರಿ (ಗ್ರಾಮೀಣ) ಕಾಂತೇಶ್ ಕುಮಾರ್ ಮಿಶ್ರಾ ಮತ್ತು ಬರ ಎಸ್ಡಿಪಿಒಲಿಪಿ ಸಿಂಗ್ ಅವರ ನೇತೃತ್ವದಲ್ಲಿ 11 ತಂಡಗಳನ್ನು ರಚಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News