ಜೆಟ್ ಏರ್‌ವೇಸ್‌ನ ಸ್ಥಾಪಕ ಗೋಯಲ್‌ರ ಮುಂಬೈ, ದಿಲ್ಲಿ ಕಟ್ಟಡಗಳ ಮೇಲೆ ಈ.ಡಿ. ದಾಳಿ

Update: 2019-08-23 17:06 GMT

ಹೊಸದಿಲ್ಲಿ, ಆ. 23: ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿ ಜೆಟ್ ಏರ್‌ವೇಸ್‌ನ ಸ್ಥಾಪಕ ನರೇಶ್ ಗೋಯಲ್ ಅವರ ಕಟ್ಟಡಗಳ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ದಾಳಿ ನಡೆಸಿದೆ.

 ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಅಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಹಾಗೂ ಹೆಚ್ಚುವರಿ ಪುರಾವೆಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಿದೆ. ಅವರ ಮುಂಬೈ ಹಾಗೂ ದಿಲ್ಲಿಯಲ್ಲಿರುವ ಕಟ್ಟಡಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹಣದ ಕೊರತೆ ಹಿನ್ನೆಲೆಯಲ್ಲಿ ಜೆಟ್ ಏರ್‌ವೇಸ್ ಎಪ್ರಿಲ್ 17ರಂದು ಹಾರಾಟ ಸ್ಥಗಿತಗೊಳಿಸಿತ್ತು. ಈ ಬಗ್ಗೆ ಕಾರ್ಪೊರೇಟ್ ವ್ಯವಹಾರ (ಎಂಸಿಎ) ಸಚಿವಾಲಯ ಪರಿಶೀಲನಾ ವರದಿಯಲ್ಲಿ ಜೆಟ್ ಏರ್‌ವೇಸ್‌ನಲ್ಲಿ ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸಿರುವುದು ಸಹಿತ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಪತ್ತೆಯಾಗಿತ್ತು ಎಂದು ಮೂಲಗಳು ಜುಲೈಯಲ್ಲಿ ಹೇಳಿತ್ತು. ಗೋಯಲ್ ಅವರು ಮಾರ್ಚ್‌ನಲ್ಲಿ ಜೆಟ್ ಏರ್‌ವೇಸ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಸ್ತುತ ಜೆಟ್ ಏರ್‌ವೇಸ್ ದಿವಾಳಿತನದ ಮರು ಪರಿಹಾರದ ಪ್ರಕ್ರಿಯೆ ಅಡಿಯಲ್ಲಿ ಇದೆ.

ಮಹಾರಾಷ್ಟ್ರ ರಾಜಧಾನಿಯಲ್ಲಿರುವ ಗೋಯಲ್ ಅವರ ನಿವಾಸ ಸಹಿತ ಮುಂಬೈ ಹಾಗೂ ದಿಲ್ಲಿಯಲ್ಲಿರುವ 12ಕ್ಕೂ ಅಧಿಕ ಕಟ್ಟಡಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕೆಲವು ಹಣಕಾಸು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ಗಂಭೀರ ಭ್ರಷ್ಟಾಚಾರ ತನಿಖಾ ಕಚೇರಿ (ಎಸ್‌ಎಫ್‌ಐಒ) ಮುಂಬೈಯಲ್ಲಿ ಗುರುವಾರ ಗೋಯಲ್ ಅವರ ವಿಚಾರಣೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News