ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸಹಕಾರ ಕೋರಿದ ಕೇಂದ್ರ

Update: 2019-08-25 07:36 GMT

ಶ್ರೀನಗರ, ಆ.24: ಕೆಲವು ಉನ್ನತ ಗುಪ್ತಚರ ಅಧಿಕಾರಿಗಳ ಮೂಲಕ ಕಳೆದ ಎರಡು ದಿನಗಳಲ್ಲಿ ಬಂಧಿತ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರನ್ನು ಸಂಪರ್ಕಿಸಿರುವ ಕೇಂದ್ರ ಗೃಹ ಸಚಿವಾಲಯ, ನೀವು ಬಿಡುಗಡೆಯಾದ ಬಳಿಕ ರಾಜ್ಯದಲ್ಲಿ ಶಾಂತಿ ಕಾಪಾಡಲು ಸಹಕಾರ ನೀಡಬೇಕೆಂದು ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ವರದಿಯನ್ನು ಒಮರ್ ಅಬ್ದುಲ್ಲಾರ ನ್ಯಾಶನಲ್ ಕಾನ್ಫರೆನ್ಸ್(ಎನ್‌ಸಿ)ಪಕ್ಷ ತಿರಸ್ಕರಿಸಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದಿದೆ.

‘‘ಕೆಲವು ಸರಕಾರಿ ಅಧಿಕಾರಿಗಳು’’ ಇಬ್ಬರು ನಾಯಕರನ್ನು ಕಸ್ಟಡಿಯಲ್ಲಿ ಭೇಟಿಯಾಗಿ, ನೀವು ಬಂಧಮುಕ್ತರಾಗಲು ಸಜ್ಜಾಗುವಾಗ ಜಮ್ಮು-ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿ ಮತ್ತೆ ನೆಲೆಸಲು ಸಹಕರಿಸುವಂತೆ ಕೋರಿಕೊಂಡಿದ್ದರು. ಆದರೆ ಇಬ್ಬರು ಮುಖಂಡರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ದುಪಡಿಸಿರುವ ಸಂಸತ್ತಿನ ನಿರ್ಧಾರದ ವಿರುದ್ಧ ತಮ್ಮ ನಿಲುವನ್ನು ಸಡಿಲಗೊಳಿಸಲು ನಿರಾಕರಿಸಿದ್ದಾರೆ ಎಂದು ಮೆಹಬೂಬಾ ನೇತೃತ್ವದ ಪಿಡಿಪಿ ಪಕ್ಷ ಮೂಲಗಳು ತಿಳಿಸಿವೆ.

 ಒಮರ್ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾರನ್ನು ಆಗಸ್ಟ್ 5ರಂದು ಬಂಧಿಸಲಾಗಿತ್ತು. ಉಮರ್‌ರನ್ನು ಗಪ್ಕರ್ ರೋಡ್‌ನಲ್ಲಿರುವ ಹರಿ ನಿವಾಸ್ ಪ್ಯಾಲೇಸ್‌ನಲ್ಲಿ ಇರಿಸಲಾಗಿದ್ದರೆ, ಮೆಹಬೂಬಾರನ್ನು ಶ್ರೀನಗರದ ಜೆ.ಕೆ. ಟೂರಿಸಂ ಡೆವಲಪ್‌ಮೆಂಟ್ ಹಟ್‌ನಲ್ಲಿ ಇರಿಸಲಾಗಿದೆ. ಈ ಇಬ್ಬರು ನಾಯಕರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಪ್ರಾತಿನಿಧ್ಯ ರದ್ದುಪಡಿಸಿರುವುದನ್ನು ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಗುರುತಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News