ಕೇರಳ ಮೂಲದ ಪಾಕಿಸ್ತಾನಿ ರಾಜಕಾರಣಿ ಬಿ.ಎಂ.ಕುಟ್ಟಿ ನಿಧನ

Update: 2019-08-25 16:23 GMT

ಕರಾಚಿ,ಆ.25: ಖ್ಯಾತ ಶಾಂತಿ ಪ್ರತಿಪಾದಕ ಹಾಗೂ ಕೇರಳ ಮೂಲದ ಪಾಕಿಸ್ತಾನಿ ರಾಜಕಾರಣಿ ಬಿ.ಎಂ.ಕುಟ್ಟಿ (89) ಅವರು ಸುದೀರ್ಘ ಅನಾರೋಗ್ಯದ ಬಳಿಕ ರವಿವಾರ ಇಲ್ಲಿ ನಿಧನರಾದರು.

1930,ಜು.15ರಂದು ಕೇರಳದ ತಿರೂರಿನ ಮಲಯಾಳಿ ಮುಸ್ಲಿಂ ಜಮೀನ್ದಾರ್ ಕುಟುಂಬದಲ್ಲಿ ಜನಿಸಿದ್ದ ಬಿಯ್ಯತ್ತಿಲ್ ಮೊಹಿಯುದ್ದೀನ್ ಕುಟ್ಟಿ ಅವರು 1949ರಲ್ಲಿ ತನ್ನ 19ನೇ ವಯಸ್ಸಿನಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು.

ಮಧ್ಯಮ ವರ್ಗದ ವಾತಾವರಣದಲ್ಲಿ ಬೆಳೆದಿದ್ದ ಕುಟ್ಟಿ ತನ್ನ ಶಾಲಾ ದಿನಗಳಲ್ಲಿ ಸಮಾಜವಾದಿ ಮತ್ತು ಎಡಪಂಥೀಯ ದೃಷ್ಟಿಕೋನವನ್ನು ಬೆಳೆಸಿಕೊಂಡಿದ್ದು,ಕಮ್ಯುನಿಸ್ಟ್ ಪಕ್ಷದೊಂದಿಗೆ ಸಂಯೋಜಿತ ಕೇರಳ ಸ್ಟುಡೆಂಟ್ಸ್ ಫೆಡರೇಷನ್‌ಗೆ ಸೇರ್ಪಡೆಗೊಂಡಿದ್ದರು.

ಪಾಕಿಸ್ತಾನಕ್ಕೆ ತೆರಳಿದ ಬಳಿಕ ಎಡಪಂಥೀಯ ಚಿಂತನೆಯ ಪಕ್ಷಗಳಾದ ಪಾಕಿಸ್ತಾನಿ ಆವಾಮಿ ಲೀಗ್ ಮತ್ತು ನ್ಯಾಷನಲ್ ಆವಾಮಿ ಪಾರ್ಟಿಯೊಂದಿಗೆ ಗುರುತಿಸಿಕೊಂಡಿದ್ದ ಕುಟ್ಟಿ,ಮೂರು ವರ್ಷ ಮೂವ್‌ಮೆಂಟ್ ಫಾರ್ ರಿಸ್ಟೋರೇಷನ್ ಆಫ್ ಡೆಮಾಕ್ರಸಿಯ ಜಂಟಿ ಮಹಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

2011ರಲ್ಲಿ ತನ್ನ ಆತ್ಮಕಥೆ ‘ಸಿಕ್ಸ್ಟಿ ಇಯರ್ಸ್‌ ಆಫ್ ಸೆಲ್ಫ್ ಎಕ್ಸೈಲ್:ನೋ ರಿಗ್ರೆಟ್ಸ್;ಎ ಪೊಲಿಟಿಕಲ್ ಅಟೊಬಯಾಗ್ರಫಿ’ಯ ಬಿಡುಗಡೆಯೊಂದಿಗೆ ಅವರು ಸುದ್ದಿಯಾಗಿದ್ದರು.

ಭಾರತ-ಪಾಕಿಸ್ತಾನ ನಡುವೆ ಶಾಂತಿಯನ್ನು ಉತ್ತೇಜಿಸಲು ಶ್ರಮಿಸುತ್ತಿರುವ ಪಾಕಿಸ್ತಾನ ಪೀಸ್ ಕೋಯೆಲಿಷನ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಕುಟ್ಟಿ ಬಲೂಚಿಸ್ತಾನದ ರಾಜ್ಯಪಾಲರ ರಾಜಕೀಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಹಲವರು ರಾಜಕೀಯ ಚಳವಳಿಗಳಲ್ಲಿಯೂ ಅವರು ಭಾಗಿಯಾಗಿದ್ದರು.

ಕೇರಳದ ಮುಖ್ಯಮಂತ್ರಿ ಪಿ.ವಿಜಯನ್ ಅವರು ಕುಟ್ಟಿ ನಿಧನಕ್ಕೆ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News