ಸೇಕ್ರೆಡ್ ಗೇಮ್ಸ್ 2ನ ಗುಂಪು ಹತ್ಯೆ ದೃಶ್ಯವನ್ನು ಐಟಂ ಸಾಂಗ್ ಗೆ ಹೋಲಿಸಿದವರಿಗೆ ನಿರ್ದೇಶಕ ನೀರಜ್ ಉತ್ತರವೇನು ?

Update: 2019-08-26 11:44 GMT

ಹೊಸದಿಲ್ಲಿ : ಸೇಕ್ರೆಡ್ ಗೇಮ್ಸ್ 2 ಇದರಲ್ಲಿ ಮುಸ್ಲಿಂ ಹುಡುಗನೊಬ್ಬ ಗುಂಪು ಥಳಿತಕ್ಕೊಳಗಾಗುತ್ತಿರುವ ದೃಶ್ಯ ಸಾಕಷ್ಟು ವಿವಾದಕ್ಕೀಡಾಗಿದ್ದು ರವಿವಾರ ಟ್ವಿಟ್ಟರಿಗರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ ಈ ನಿರ್ದಿಷ್ಟ ದೃಶ್ಯವನ್ನು ಐಟಂ ನಂಬರ್ ಗೆ ಹೋಲಿಸಿದರಲ್ಲದೆ ಈ ಘಟನೆಗೂ ಚಿತ್ರ ಕಥೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಕ್ಕೆ ನಿರ್ದೇಶಕ ನೀರಜ್ ಘೈವಾನ್ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ಟ್ವೀಟ್ ಮಾಡಿದ ವ್ಯಕ್ತಿಯೊಬ್ಬರು ''ಇತರ ನಿರ್ದೇಶಕರು ತಮ್ಮ ಚಿತ್ರಕಥೆಗೆ ಸಂಬಂಧವೇ ಇಲ್ಲದ ಐಟಂ ನಂಬರ್ ಸೇರಿಸಿದರೆ, ಸೇಕ್ರೆಡ್ ಗೇಮ್ಸ್ 2 ನಿರ್ದೇಶಕರು ತಮ್ಮ ಕಥೆಗೆ ಸಂಬಂಧವಿಲ್ಲದ ಗುಂಪು ಥಳಿತ ಘಟನೆ ಸೇರಿಸಿದ್ದಾರೆ'' ಎಂದು ಬರೆದಿದ್ದರು.

ಇದಕ್ಕೆ ನೀರಜ್ ಪ್ರತಿಕ್ರಿಯೆ ಹೀಗಿತ್ತು- ''ನಿಜವಾದ ಗುಂಪು ಥಳಿತ ಘಟನೆ ನಡೆದಾಗ ನಿಮಗೆ ಕನಿಷ್ಠ ಅದನ್ನು ವಿರೋಧಿಸಿ ಟ್ವೀಟ್ ಮಾಡುವ ಧೈರ್ಯವಿರಲಿಲ್ಲ. ಇದೀಗ ಬೇರೊಬ್ಬರು ಈ ಗುಂಪು ಥಳಿತ ವಿಚಾರವನ್ನು ಜಾಗತಿಕ ವೇದಿಕೆಯಲ್ಲಿ ಎತ್ತಿದಾಗ ಅದನ್ನು ನೀವು ಐಟಂ ನಂಬರ್ ಎನ್ನುತ್ತೀರಾ ? ಆಶ್ಚರ್ಯ !'' ಎಂದು ನೀರಜ್ ಟ್ವೀಟ್ ಮಾಡಿದ್ದಾರೆ.

''ನಾನು ಗುಂಪು ಥಳಿತ ದೃಶ್ಯವನ್ನು ನಿರ್ದೇಶಿಸಿದ್ದೆ. ನಿಮಗೆ ಅದು ಇಷ್ಟವಾಗಿಲ್ಲ ಎಂದು ನೀವು ಹೇಳಬಹುದು. ಆದರೆ ನಿಮ್ಮ ನಿಜ ಹೆಸರಿನೊಂದಿಗೆ ಇಂತಹ ಒಂದು ದೃಶ್ಯವನ್ನು ಪ್ರದರ್ಶಿಸಲು ಎಷ್ಟು ಕಷ್ಟವಿದೆಯೆಂಬ ಕಲ್ಪನೆ ನಿಮಗಿಲ್ಲ. ಹೀಗಿರುವಾಗ ಅದನ್ನು ತುಚ್ಛವಾಗಿ ಕಂಡು ಪ್ರತಿಕ್ರಿಯಿಸಿದಾಗ ಬೇಸರವಾಗುತ್ತದೆ'' ಎಂದೂ ನೀರಜ್ ಬರೆದಿದ್ದಾರೆ.

ನೀರಜ್ ಹಾಗೂ ಅನುರಾಗ್ ಕಶ್ಯಪ್ ಸೇಕ್ರೆಡ್ ಗೇಮ್ಸ್ 2 ನಿರ್ದೇಶಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News