×
Ad

ನೀರಿನ ಬಿಲ್ ಬಾಕಿ ಮನ್ನಾ ಘೋಷಿಸಿದ ಅರವಿಂದ್ ಕೇಜ್ರಿವಾಲ್

Update: 2019-08-27 19:33 IST

ಹೊಸದಿಲ್ಲಿ,ಆ.27: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದಿಲ್ಲಿ ಜಲ ಮಂಡಳಿಗೆ ಗ್ರಾಹಕರು ಬಾಕಿಯಿಟ್ಟಿರುವ ನೀರಿನ ಬಿಲ್ ಮೊತ್ತವನ್ನು ಮನ್ನ ಮಾಡಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ವಿಧಾನಸಭೆಗೆ ಸಜ್ಜಾಗುತ್ತಿರುವ ದಿಲ್ಲಿಯಲ್ಲಿ ಸರಕಾರ ಈಗಾಗಲೇ ವಿದ್ಯುತ್ ಬಿಲ್ ಕಡಿಮೆ ಮಾಡುವ ದೃಷ್ಟಿಯಿಂದ ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ದಿಲ್ಲಿಯಲ್ಲಿ ಮುಂದಿನ ವರ್ಷ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಈ ಕುರಿತು ಹೇಳಿಕೆ ನೀಡಿರುವ ಕೇಜ್ರಿವಾಲ್, ದಿಲ್ಲಿ ಜಲ ಮಂಡಳಿಯ ಪುಸ್ತಕವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಗ್ರಾಹಕರು ಮಂಡಳಿಗೆ ಬಾಕಿಯಿಟ್ಟಿರುವ ಬಿಲ್ ಮೊತ್ತವನ್ನು ಮನ್ನ ಮಾಡುವುದಾಗಿ ಇಂದು ನಾವು ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಕ್ರಮವು ದಿಲ್ಲಿಯ ಜನರು ಮುಖ್ಯವಾಹಿನಿಗೆ ಸೇರಲು ಮತ್ತು ನೀರಿನ ಮೀಟರ್‌ಗಳನ್ನು ಅಳವಡಿಸಲು ನೀಡಲಾದ ಬಹಿರಂಗ ಮುಕ್ತ ಆಹ್ವಾನವಾಗಿದೆ ಎಂದು ಹೇಳಿಕೊಂಡಿರುವ ಕೇಜ್ರಿವಾಲ್, ನವೆಂಬರ್ 30ರೊಳಗೆ ನೀರಿ ಮೀಟರ್ ಅಳವಡಿಸುವ ಗ್ರಾಹಕರಿಗೆ ಮಾತ್ರ ಈ ಯೋಜನೆಯ ಲಾಭಪಡೆಯಬಹುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 1ರಂದು ಕೇಜ್ರಿವಾಲ್ ಮಾಡಿದ್ದ ಘೋಷಣೆಯಲ್ಲಿ ಪ್ರತಿ ತಿಂಗಳು 200 ಯುನಿಟ್‌ವರೆಗೆ ವಿದ್ಯುತ್ ಬಳಸುವ ಗ್ರಾಹಕರಿಗೆ ವಿದ್ಯುತನ್ನು ಸಂಪೂರ್ಣ ಉಚಿತವಾಗಿ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದರು. 201ರಿಂದ 400 ಯುನಿಟ್‌ಗಳ ಮಧ್ಯೆ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ಬಿಲ್ ಮೊತ್ತದ ಅರ್ಧದಷ್ಟು ಪಾವತಿಸಿದರೆ ಸಾಕು ಉಳಿದ ಮೊತ್ತಕ್ಕೆ ಸರಕಾರ ಸಬ್ಸಿಡಿ ನೀಡಲಿದೆ ಎಂದು ಅವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News