ಆರ್‌ಬಿಐ ಹಣ ವರ್ಗಾವಣೆ: ವಿಪಕ್ಷಗಳಿಂದ ‘ವಿಲಕ್ಷಣ’ ಆರೋಪ ಎಂದ ನಿರ್ಮಲಾ ಸೀತಾರಾಮನ್

Update: 2019-08-27 17:05 GMT

ಹೊಸದಿಲ್ಲಿ, ಆ. 27: ಭಾರತೀಯ ರಿಸರ್ವ್ ಬ್ಯಾಂಕ್ 1.76 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸುವ ನಿರ್ಧಾರ ತೆಗೆದುಕೊಂಡ ಬಳಿಕ ಪ್ರತಿಪಕ್ಷಗಳು ಆರ್‌ಬಿಐಯ ವಿಶ್ವಾಸಾರ್ಹತೆ ಪ್ರಶ್ನಿಸಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಇದಕ್ಕೆ ಮಂಗಳವಾರ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಈ ಆರೋಪ ‘ವಿಲಕ್ಷಣ’ ಎಂದು ಕರೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೀತಾರಾಮನ್, ಆರ್‌ಬಿಐ ಹೆಚ್ಚುವರಿ 1.76 ಲಕ್ಷ ಕೋಟಿ ರೂಪಾಯಿ ವರ್ಗಾವಣೆ ನಿರ್ಧಾರವನ್ನು ಕೇಂದ್ರ ಬ್ಯಾಂಕಿಂಗ್ ಸಂಸ್ಥೆ ನಿಯೋಜಿತ ಬಿಮಲ್ ಜಲನ್ ಸಮಿತಿ ಕೈಗೊಂಡಿದೆ. ಇದರಲ್ಲಿ ಕೇಂದ್ರ ಸರಕಾರದ ಪಾತ್ರ ಇಲ್ಲ ಎಂದಿದ್ದಾರೆ. ಈ ಸಮಿತಿಯನ್ನು ಆರ್‌ಬಿಐ ನಿಯೋಜಿಸಿದೆ. ಇದರಲ್ಲಿ ಪ್ರಮುಖ ತಜ್ಞರು ಇದ್ದಾರೆ. ಸಮಿತಿ ನೀಡಿದ ಸೂತ್ರದ ಪ್ರಕಾರ ಈ ಮೊತ್ತವನ್ನು ನೀಡಲು ಆರ್‌ಬಿಐ ನಿರ್ಧರಿಸಿತ್ತು. ಹಾಗಾಗಿ ಆರ್‌ಬಿಐಯ ವಿಶ್ವಾಸಾರ್ಹತೆ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಎತ್ತುವುದು ನನಗೆ ಸ್ವಲ್ಪ ವಿಲಕ್ಷಣದಂತೆ ಕಾಣುತ್ತದೆ ಎಂದು ಸೀತಾರಾಮನ್ ಹೇಳಿದರು.

ಆರ್‌ಬಿಐ ಮಾಡಿದ ಹಣ ವರ್ಗಾವಣೆಯಲ್ಲಿ 2018-19ರ ಹೆಚ್ಚುವರಿ 1.23 ಲಕ್ಷ ಕೋಟಿ ರೂ. ಹಾಗೂ ಆರ್‌ಬಿಐ ಮಂಡಳಿ ಅಳವಡಿಸಿದ ಪರಿಷ್ಕೃತ ಆರ್ಥಿಕ ಬಂಡವಾಳ ರೂಪುರೇಷೆಯಡಿ ಗುರುತಿಸಲಾಗಿರುವ ನಿಬಂಧನೆಗಳಿಗೆ ಅನುಗುಣವಾಗಿ 52,637 ಕೋಟಿ ರೂ. ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News