ಬಿಎಸ್‌ಪಿ ಅಧ್ಯಕ್ಷೆಯಾಗಿ ಮಾಯಾವತಿ ಪುನರಾಯ್ಕೆ
ಲಕ್ನೋ,ಆ.28: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಬುಧವಾರ ಪಕ್ಷದ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಹಿರಿಯ ಪದಾಧಿಕಾರಿಗಳು,ಪಕ್ಷದ ರಾಜ್ಯ ಘಟಕಗಳು ಮತ್ತು ದೇಶಾದ್ಯಂತದಿಂದ ಆಯ್ಕೆ ಮಾಡಲಾದ ಪ್ರತಿನಿಧಿಗಳ ವಿಶೇಷ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷೆಯಾಗಿ ಸರ್ವಾನುಮತದಿಂದ ಪುನರಾಯ್ಕೆಗೊಂಡಿದ್ದಾರೆ.
ಬಿಎಸ್‌ಪಿ ಆಂದೋಲನವನ್ನು ಮುಂದುವರಿಸುವ ತನ್ನ ನಿರಂತರ ಬದ್ಧತೆಯ ಬಗ್ಗೆ ಭರವಸೆ ನೀಡಿದ ಮಾಯಾವತಿ,ದಲಿತ,ಆದಿವಾಸಿ ಮತ್ತು ಇತರ ಹಿಂದುಳಿದ ಸಮುದಾಯಗಳಲ್ಲಿ ಜನಿಸಿದ ಸಂತರು,ಗುರುಗಳು ಮತ್ತು ಮಹಾನ್ ವ್ಯಕ್ತಿಗಳ ಮಾನವೀಯ ಆದರ್ಶಗಳನ್ನು ಪಾಲಿಸಲು ತಾನು ಎಂದಿನಂತೆ ಸದಾ ಸಿದ್ಧವಿರುವುದಾಗಿ ತಿಳಿಸಿದರು.
ಪಕ್ಷದ ಹಿತಾಸಕ್ತಿಯಲ್ಲಿ ತನ್ನನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ ಮತ್ತು ತಾನು ಯಾರಿಗೂ ಮಣಿಯುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಪಣ ತೊಟ್ಟರು.
ಮುಂಬರುವ ಹರ್ಯಾಣ,ಮಹಾರಾಷ್ಟ್ರ,ಜಾರ್ಖಂಡ ಮತ್ತು ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ತನ್ನ ಪೂರ್ಣ ಬಲದೊಂದಿಗೆ ಸ್ಪರ್ಧಿಸಬೇಕಿದೆ ಎಂದು ಅವರು ಕರೆ ನೀಡಿದರು.