ನನ್ನ ವಿರುದ್ಧ ಪುರಾವೆಯಿದ್ದರೆ ಆರೋಪಪಟ್ಟಿ ದಾಖಲಿಸಲಿ: ಕಾರ್ತಿ ಚಿದಂಬರಂ
ಹೊಸದಿಲ್ಲಿ, ಆ.28: ತನ್ನ ವಿರುದ್ಧದ ಆರೋಪಕ್ಕೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳ ಬಳಿ ಪುರಾವೆಗಳಿದ್ದರೆ ಆರೋಪ ಪಟ್ಟಿ ದಾಖಲಿಸಲಿ ಎಂದು ಮಾಜಿ ವಿತ್ತಸಚಿವ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸವಾಲೆಸೆದಿದ್ದಾರೆ.
ಕಾರ್ತಿ ಚಿದಂಬರಂ ವಿದೇಶದಲ್ಲಿ ಬೇನಾಮಿ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂಬ ತನಿಖಾ ಸಂಸ್ಥೆಗಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕಾರ್ತಿ, ಅವರು ಕೆಲವು ವಿಲಕ್ಷಣ ಸ್ಥಳಗಳ ಹೆಸರನ್ನು ಉಲ್ಲೇಖಿಸಿದ್ದಾರೆ.
“ನಾನೋರ್ವ ಸಂಸದ. ನಾಮಪತ್ರ ಸಲ್ಲಿಸುವ ಮುನ್ನ ನನ್ನ ಆಸ್ತಿ ವಿವರ ನೀಡಿದ್ದೇನೆ. ನನ್ನ ವಿರುದ್ಧ ಅವರಲ್ಲಿ ಸಾಕ್ಷಿಗಳಿದ್ದರೆ ಅವರೇಕೆ ಆರೋಪ ಪಟ್ಟಿ ದಾಖಲಿಸುತ್ತಿಲ್ಲ” ಎಂದು ಪ್ರಶ್ನಿಸಿದರು.
ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ(ಎಫ್‌ಐಪಿಬಿ)ಯಿಂದ ಅನುಮತಿ ದೊರಕಿಸಿಕೊಡಲು ಪಡೆದ ಲಂಚದ ಹಣವನ್ನು ಹಲವು ಬೇನಾಮಿ ಸಂಸ್ಥೆಗಳ ಮೂಲಕ ಕಾರ್ತಿ ವಿದೇಶಕ್ಕೆ ಅಕ್ರಮವಾಗಿ ವರ್ಗಾಯಿಸಿದ್ದಾರೆ. ಇದರಲ್ಲಿ ಒಂದು ಸಂಸ್ಥೆಯಾಗಿರುವ ‘ಅಡ್ವಾಂಟೇಜ್ ಸ್ಟ್ರಟೆಜಿಕ್ ಕನ್ಸಲ್ಟೆನ್ಸಿ ಪ್ರೈ.ಲಿ(ಎಎಸ್‌ಸಿಪಿಎಲ್) ಕಾರ್ತಿ ಚಿದಂಬರಂ ಅವರ ವಿದೇಶಿ ಪ್ರವಾಸದ ಸಂದರ್ಭದ ಆಹಾರ ವೆಚ್ಚವನ್ನು ಭರಿಸಿದೆ. ಅಲ್ಲದೆ 2014ರಲ್ಲಿ ವಿದೇಶದಲ್ಲಿ ಹೋಟೆಲ್ ವಾಸ್ತವ್ಯದ ಖರ್ಚು, 2013ರಲ್ಲಿ ವಿಂಬಲ್ಡನ್ ಟೂರ್ನಿ ಹಾಗೂ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಟಿಕೆಟ್‌ಗೆ ಈ ಸಂಸ್ಥೆಯೇ ಹಣ ಪಾವತಿಸಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ತಿ, “ನನಗೆ ವಿದೇಶದಲ್ಲಿ ಮಿತ್ರರಿದ್ದಾರೆ ಮತ್ತು ವಿದೇಶದ ಪ್ರವಾಸದ ವೆಚ್ಚವನ್ನು ಅವರು ಭರಿಸಿದ್ದಾರೆ. ಅಷ್ಟಕ್ಕೇ ನಾನು ಅವರ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಹೇಳಲಾದೀತೇ ಎಂದುತ್ತರಿಸಿದರು.” ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಎಫ್‌ಐಪಿಬಿಯಿಂದ ಅನುಮತಿ ಪಡೆಯಲು ತಾನು ಕಾರ್ತಿ ಚಿದಂಬರಂ ನೆರವು ಪಡೆದಿದ್ದೆ ಮತ್ತು ಅವರು ತನ್ನ ತಂದೆ ಹಾಗೂ ಆಗ ವಿತ್ತ ಸಚಿವರಾಗಿದ್ದ ಚಿದಂಬರಂ ಅವರೊಂದಿಗೆ ಭೇಟಿಗೆ ವ್ಯವಸ್ಥೆ ಮಾಡಿದ್ದರು ಎಂಬ ಇಂದ್ರಾಣಿ ಮುಖರ್ಜಿ ಹೇಳಿಕೆಯ ಬಗ್ಗೆ ಉತ್ತರಿಸಿದ ಕಾರ್ತಿ, “ನನ್ನ ಜೀವನದಲ್ಲಿ ಇದುವರೆಗೆ ಇಂದ್ರಾಣಿ ಮುಖರ್ಜಿಯನ್ನು ಭೇಟಿಯಾಗಿಲ್ಲ. 10 ಲಕ್ಷ ರೂ. ಲಂಚ ಪಡೆದಿರುವ ಆರೋಪ ಅಸಂಬದ್ಧವಾಗಿದೆ. ಇದನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೂ ಹೇಳಿದ್ದೇನೆ” ಎಂದರು.