ಏಕ ಬ್ರಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕಾಗಿ ಎಫ್ಡಿಐ ನಿಯಮಗಳಲ್ಲಿ ಸಡಿಲಿಕೆ
ಹೊಸದಿಲ್ಲಿ,ಆ.28: ವಿದೇಶಿ ಏಕ ಬ್ರಾಂಡ್ ಚಿಲ್ಲರೆ ವ್ಯಾಪಾರಗಳಿಗೆ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳನ್ನು ಸಡಿಲಿಸಿರುವ ಸರಕಾರವು,ಗುತ್ತಿಗೆ ತಯಾರಿಕೆ ಮತ್ತು ಕಲ್ಲಿದ್ದಲು ಗಣಿಗಾರಿಕೆಗಳಲ್ಲಿ ವಿದೇಶಿ ಹೂಡಿಕೆಗೆ ಅನುಮತಿ ನೀಡಿದೆ.
ಬುಧವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ ಗೋಯಲ್ ಅವರು,ಕಲ್ಲಿದ್ದಲು ಗಣಿಗಾರಿಕೆ ಮತ್ತು ಸಂಬಂಧಿತ ಮೂಲಸೌಕರ್ಯಗಳಲ್ಲಿ ಸ್ವಯಂಚಾಲಿತ ಮಾರ್ಗದಡಿ ಶೆ.100ರಷ್ಟು ಎಫ್‌ಡಿಐಗೆ ಅನುಮತಿ ನೀಡಲಾಗಿದೆ ಎಂದರು.
ದೇಶೀಯ ತಯಾರಿಕೆಯನ್ನು ಉತ್ತೇಜಿಸಲು ಗುತ್ತಿಗೆ ತಯಾರಿಕೆ ಕ್ಷೇತ್ರದಲ್ಲಿ ಸ್ವಯಂಚಾಲಿತ ಮಾರ್ಗದಡಿ ಶೇ.100ರಷ್ಟು ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಶೇ.26ರಷ್ಟು ಎಫ್‌ಡಿಐಗೆ ಅನುಮತಿ ನೀಡಲಾಗಿದೆ ಎಂದೂ ಅವರು ತಿಳಿಸಿದರು.
ಏಕ ಬ್ರಾಂಡ್ ರಿಟೇಲಿಂಗ್ ಕುರಿತು ಗೋಯಲ್ ಅವರು,ಶೇ.30ರಷ್ಟು ಸರಕುಗಳನ್ನು ದೇಶೀಯ ಮೂಲಗಳಿಂದ ಪಡೆಯಬೇಕು ಎಂಬ ಕಡ್ಡಾಯ ನಿಯಮದ ವ್ಯಾಖ್ಯೆಯನ್ನು ವಿಸ್ತರಿಸಲಾಗಿದೆ. ಏಕ್ ಬ್ರಾಂಡ್ ರಿಟೇಲರ್‌ಗಳು ಆನ್‌ಲೈನ್ ಮಾರಾಟವನ್ನು ಆರಂಭಿಸಲು ಕಡ್ಡಾಯವಾಗಿ ಭೌತಿಕ ಮಾರಾಟ ಮಳಿಗೆಯನ್ನು ಹೊಂದಿರಬೇಕು ಎಂಬ ಹಿಂದಿನ ಷರತ್ತನ್ನು ಕೈಬಿಡಲಾಗಿದೆ ಎಂದರು.