ಹೆಡ್‌ಫೋನ್ ಬೆಲೆ ಬಗ್ಗೆ ವಾಗ್ವಾದ: ಮದ್ರಸ ಅಧ್ಯಾಪಕನ ಥಳಿಸಿ ಹತ್ಯೆ

Update: 2019-08-28 16:54 GMT

ಹೊಸದಿಲ್ಲಿ, ಆ. 28: ಹೆಡ್‌ಫೋನ್‌ಗಳ ಬೆಲೆಯ ಬಗ್ಗೆ ವಾಗ್ವಾದ ನಡೆದ ಬಳಿಕ 27ರ ಹರೆಯದ ಮದ್ರಸದ ಅಧ್ಯಾಪಕರೋರ್ವರನ್ನು ಇಬ್ಬರು ವ್ಯಾಪಾರಿಗಳು ಥಳಿಸಿ ಹತ್ಯೆಗೈದ ಘಟನೆ ಉತ್ತರ ದಿಲ್ಲಿಯ ಕೊಟ್ವಾಲಿ ಪ್ರದೇಶದಲ್ಲಿ ಸೋಮವಾರ ನಡೆದಿದೆ.

ಅಧ್ಯಾಪಕನನ್ನು ಗುಂಪೊಂದು ಥಳಿಸಿ ಹತ್ಯೆಗೈದಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ನಾವು ಇಬ್ಬರನ್ನು ಬಂಧಿಸಿದ್ದೇವೆ. ಇತರರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥಳಿತಕ್ಕೊಳಗಾಗಿ ಮೃತಪಟ್ಟ ಅಧ್ಯಾಪಕನನ್ನು ಮುಹಮ್ಮದ್ ಉವೈಸಿ ಎಂದು ಗುರುತಿಸಲಾಗಿದೆ.

ಉತ್ತರಪ್ರದೇಶದ ಶಾಮ್ಲಿಯ ನಿವಾಸಿಯಾಗಿರುವ ಇವರು ಗ್ರೇಟರ್ ನೋಯ್ಡಾದ ಮದ್ರಸದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹಳೆ ದಿಲ್ಲಿ ರೈಲ್ವೆ ನಿಲ್ದಾಣದ ನಿರ್ಗಮನ ಗೇಟ್‌ನ ಸಮೀಪದ ವ್ಯಕ್ತಿಯೋರ್ವ ಪ್ರಜ್ಞೆ ಕಳೆದುಕೊಂಡು ಬಿದ್ದಿರುವ ಬಗ್ಗೆ ಕೊಟ್ವಾಲಿ ಪೊಲೀಸ್ ಠಾಣೆಗೆ ನಿಯಂತ್ರಣ ಕೊಠಡಿ ಮಾಹಿತಿ ನೀಡಿತ್ತು.

‘‘ಕೊಟ್ವಾಲಿ ಪೊಲೀಸ್ ಠಾಣೆಯ ಪೊಲೀಸರ ತಂಡ ಕೂಡಲೇ ಘಟನ ಸ್ಥಳಕ್ಕೆ ಧಾವಿಸಿತು ಹಾಗೂ ಅವರನ್ನು ಅರುಣಾ ಅಸಫ್ ಅಲಿ ಆಸ್ಪತ್ರೆಗೆ ಕೊಂಡೊಯ್ದಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಉವೈಸಿ ಹಾಗೂ ಲಲ್ಲನ್, ಆತನ ಸಹವರ್ತಿ ಆಯುಬ್ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ ಉವೈಸಿ ಮೃತಪಟ್ಟಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ’’ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ಉತ್ತರ) ಹರೇಂದ್ರ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News