ಪರ್ಯಾಯ ಸಮಾಜ ನಿರ್ಮಿಸುವ ಯೋಜನೆ

Update: 2019-08-29 18:43 GMT

ವರ್ಣ, ಕುಲ, ಜಾತಿ ಮತ್ತು ಲಿಂಗಭೇದಗಳಿಲ್ಲದೆ ಮನುವಾದ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಮನುವಾದವು ಲಿಂಗಭೇದದ ಮೂಲಕ ಜನಸಮುದಾಯದ ಅರ್ಧ ಭಾಗವನ್ನು ಹತೋಟಿಯಲ್ಲಿಟ್ಟುಕೊಂಡು ಪುರುಷಪ್ರಧಾನ ಸಮಾಜಕ್ಕೆ ಭದ್ರ ಅಡಿಪಾಯ ಹಾಕಿತು. ಉಳಿದರ್ಧ ಜನಸಮುದಾಯದಲ್ಲಿ ಪ್ರತಿಶತ 90ರಷ್ಟಿರುವ ಶೂದ್ರರನ್ನು ಜಾತಿಗಳ ಆಧಾರದ ಮೇಲೆ ಹತೋಟಿಯಲ್ಲಿಟ್ಟುಕೊಂಡಿತು. ಹೀಗೆ ಭಾರತೀಯ ಸಮಾಜ ಮೇಲ್ವರ್ಗದ ಪುರುಷ ಸಮಾಜವಾಗಿ ಮುಂದುವರಿಯಿತು. ಇದು ಮನುಸ್ಮತಿ ನಿರ್ಮಿಸಿದ ಸಾಮಾಜಿಕ ವ್ಯವಸ್ಥೆಯಾಗಿದೆ. ಇಂಥ ವ್ಯವಸ್ಥೆಯ ಸಮಾಜವನ್ನು ತಿರಸ್ಕರಿಸುವುದರ ಮೂಲಕ ಜಾತಿ, ವರ್ಗ ಮತ್ತು ಲಿಂಗಭೇದಗಳಿಲ್ಲದ ಪರ್ಯಾಯ ಸಮಾಜವನ್ನು ಸೃಷ್ಟಿಸುವ ಯೋಜನೆಯನ್ನು ಬಸವಣ್ಣನವರು ರೂಪಿಸಿದರು. ಮೇಲು ಕೀಳಿಲ್ಲದ, ಹಸಿವಿಲ್ಲದ ಮತ್ತು ದಬ್ಬಾಳಿಕೆಯಿಲ್ಲದ ಸಂಸ್ಕಾರಯುತವಾದ ಪರ್ಯಾಯ ಸಮಾಜವನ್ನು ನಿರ್ಮಿಸಿ ಅದಕ್ಕೆ ಶರಣ ಸಂಕುಲ ಎಂದು ಕರೆದರು.

ಬಸವಣ್ಣನವರು ಕಾಯಕಗಳನ್ನು ಗುರುತಿಸಿದರು. ಅವುಗಳಲ್ಲಿನ ಜಾತಿಯ ವಿಷವನ್ನು ತೆಗೆದರು. ಎಲ್ಲ ಕಾಯಕಗಳನ್ನು ಸಮಾನವಾಗಿ ಕಂಡರು. ಪ್ರತಿಯೊಂದು ಕಾಯಕ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕಾಯಕಜೀವಿಗಳು ತಮ್ಮ ಕಾಯಕದಲ್ಲಿ ಶ್ರದ್ಧೆಯಿಟ್ಟು ಆ ಕಾಯಕದ ಉತ್ಪಾದನೆ ಅಥವಾ ಸೇವೆಯನ್ನು ಉನ್ನತಮಟ್ಟಕ್ಕೆ ಒಯ್ಯುವಂಥ ಸೃಜನಶೀಲತೆಯನ್ನು ಬೆಳೆಸಿಕೊಳ್ಳುವಂಥ ವಾತಾವರಣ ಸೃಷ್ಟಿಸಿದರು. ಕಾಯಕಜೀವಿಗಳೂ ಎಲ್ಲ ತೆರನಾದ ಕೀಳರಿಮೆಯಿಂದ ಹೊರಬಂದು ತಮ್ಮ ಕಾಯಕದಲ್ಲಿ ಆನಂದವನ್ನು ಅನುಭವಿಸುತ್ತ ಔನ್ನತ್ಯವನ್ನು ಸಾಧಿಸತೊಡಗಿದರು. ಈ ರೀತಿಯ ಅಭಿವೃದ್ಧಿಯನ್ನು ಶರಣಸಂಕುಲದ ಕಾಯಕಜೀವಿಗಳು ಸಾಧಿಸಲು ಜಾತಿನಿರಾಕರಣೆಯ ಪ್ರಜ್ಞೆ ಬಹಳ ಉಪಯುಕ್ತವಾಯಿತು.
ಲಿಂಗಾಯತ ಧರ್ಮಗುರು ಬಸವಣ್ಣನವರು 12ನೇ ಶತಮಾನದಲ್ಲೇ ಆರಂಭಿಸಿದ ಈ ಜಾತಿವಿನಾಶ ಚಳವಳಿ ಇಂದು ಹಿಂದೆಂದಿಗಿಂತಲೂ ಹೆಚ್ಚು ಅವಶ್ಯವಾಗಿದೆ. ಇಷ್ಟಲಿಂಗ ಧಾರಣ ಮಾಡಿ ಲಿಂಗಾಯತರಾದವರಲ್ಲಿ ಜಾತಿಭೇದ, ವರ್ಣಭೇದ, ವರ್ಗಭೇದ ಮತ್ತು ಲಿಂಗಭೇದಗಳಿಲ್ಲ ಎಂದು ಸಾರಿದರು. ಸಮಗಾರ ಹರಳಯ್ಯನವರು ಮತ್ತು ಬ್ರಾಹ್ಮಣ ಮೂಲದ ಮಧುವರಸರು ಲಿಂಗವಂತ ಧರ್ಮ ಸ್ವೀಕರಿಸಿ ಎಲ್ಲ ಭೇದಗಳಿಂದ ಮುಕ್ತರಾದರು. ಹರಳಯ್ಯನವರ ಮಗ ಶೀಲವಂತ ಮತ್ತು ಮಧುವರಸರ ಮಗಳು ಲಾವಣ್ಯಳ ವಿವಾಹವನ್ನು ಬಸವಾದಿ ಶರಣರು ಏರ್ಪಡಿಸಿದರು. ಮನುಧರ್ಮಶಾಸ್ತ್ರದ ಪ್ರಕಾರ ಇದು ವಿಲೋಮ ವಿವಾಹ ಎಂದು ವೈದಿಕರು ಗುಲ್ಲೆಬ್ಬಿಸಿದರು. ಶರಣರಿಗೆ ಶಿಕ್ಷೆ ವಿಧಿಸಬೇಕೆಂದು ಬಿಜ್ಜಳ ರಾಜನ ಮೇಲೆ ಒತ್ತಡ ತಂದರು. ವೈದಿಕರ ಶಾಸ್ತ್ರಗಳು ಹೇಳಿದಂತೆ ಬಿಜ್ಜಳನ ಶಸ್ತ್ರಗಳು ಕೇಳಿದವು. ಹರಳಯ್ಯ ಮಧುವರಸರಿಗೆ ಎಳೆಹೂಟೆ ಶಿಕ್ಷೆಯಾಯಿತು. ಹೀಗೆ ವೈದಿಕರು ಬಸವಣ್ಣನವರ ಶರಣಸಂಕುಲವೆಂಬ ನವಸಮಾಜದ ಮೇಲೆ ಬಿಜ್ಜಳನ ಮೇಲೆ ಒತ್ತಡ ತಂದು ಕ್ಷಿಪ್ರಕ್ರಾಂತಿ ಮಾಡಿಸಿದರು. ಆಗ ಬಹಳಷ್ಟು ಶರಣರ ಕಗ್ಗೊಲೆಯಾಯಿತು. ಸಮಾನತೆ ಸಾರುವ ಬಹಳಷ್ಟು ವಚನಕಟ್ಟುಗಳು ಬೆಂಕಿಗೆ ಆಹುತಿಯಾದವು. ಸಹಸ್ರ ಸಹಸ್ರ ಶರಣರು ದಿಕ್ಕಾಪಾಲಾಗಿ ಹೋದರು. ಸಮಾನತೆಗಾಗಿ ಹೋರಾಟ ಮಾಡಿದ ದಾರ್ಶನಿಕರನ್ನು ಹೀಗೆ ಸಾಮೂಹಿಕವಾಗಿ ಕೊಲೆ ಮಾಡಿದ ಘಟನೆ ಜಗತ್ತಿನಲ್ಲಿ ಎಲ್ಲಿಯೂ ನಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News