ಮಹಾರಾಷ್ಟ್ರದಲ್ಲಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಿಲಿಂಡರ್ ಸ್ಪೋಟ; 13 ಸಾವು
ಮುಂಬೈ,ಆ.31: ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿರುವ ರಸಾಯನಿಕ ಕಾರ್ಖಾನೆಯಲ್ಲಿ ಶನಿವಾರ ನಡೆದ ಸಾರಜನಕ ಸಿಲಿಂಡರ್‌ನ ಸರಣಿ ಸ್ಫೋಟದಲ್ಲಿ ಕನಿಷ್ಟ 13 ಮಂದಿ ಸಾವನ್ನಪ್ಪಿದ್ದು,58 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 9.45ರ ಸುಮಾರಿಗೆ ಕಾರ್ಖಾನೆಯಲ್ಲಿ ಇಟ್ಟಿದ್ದ ರಾಸಾಯನಿಕ ತುಂಬಿದ್ದ ಬ್ಯಾರೆಲ್‌ನಲ್ಲಿ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸರಣಿ ಸ್ಫೋಟಗಳು ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆ ನಡೆದ ಸಮಯದಲ್ಲಿ ಕನಿಷ್ಟ ನೂರು ಮಂದಿ ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಪೈಕಿ ಕನಿಷ್ಟ 13 ಮಂದಿ ಸಾವನ್ನಪ್ಪಿದ್ದರೆ, 58 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದರೂ ಸ್ಥಳದಲ್ಲಿ ಅಗ್ನಿಶಾಮಕ ದಳ, ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯ ಮುಂದುವರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಔಷಧಿಗಳನ್ನು ತಯಾರಿಸಲು ಬಳಸುವ ರಾಸಾಯನಿಕವನ್ನು ತಯಾರಿಸುವ ರುಮಿತ್ ಕೆಮ್‌ಸಿಂಥ್ ಪ್ರೈ.ಲಿ. ಹೆಸರಿನ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ಈ ಕಾರ್ಖಾನೆಯಲ್ಲಿ ಸಾರಜನಕ ಅನಿಲ ಸಿಲಿಂಡರ್‌ಗಳು ಮತ್ತು ಬ್ಯಾರೆಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದೇ ಸ್ಫೋಟದ ತೀವ್ರತೆ ಹೆಚ್ಚಲು ಕಾರಣವಾಗಿದೆ.