×
Ad

ಎನ್‍ಆರ್ ಸಿ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇವೆ: ಬಿಜೆಪಿ ನಾಯಕ ಹಿಮಂತ ಶರ್ಮ

Update: 2019-08-31 12:56 IST

ಗುವಹಾಟಿ, ಆ.31: “ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ನ ಈಗಿನ ಸ್ವರೂಪದಲ್ಲಿ ನಾವು ವಿಶ್ವಾಸ ಕಳೆದುಕೊಂಡಿದ್ದೇವೆ. ಹಲವಾರು ಮಂದಿ ನೈಜ ಭಾರತೀಯರನ್ನೇ ಪಟ್ಟಿಯಿಂದ ಹೊರಗಿಟ್ಟಿರುವಾಗ ಈ ದಾಖಲೆ ಅಸ್ಸಾಮೀ ಸಮಾಜಕ್ಕೆ ಕೆಂಪಕ್ಷರ ಎಂದು ಹೇಗೆ ಹೇಳಬಹುದು?'' ಎಂದು ಅಸ್ಸಾಂ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

“ದಕ್ಷಿಣ ಸಾಲ್ಮರ, ಧುಬ್ರಿ ಮುಂತಾದ ಬಾಂಗ್ಲಾದೇಶ ಗಡಿಗೆ ಹೊಂದಿರುವ ಜಿಲ್ಲೆಗಳಲ್ಲಿ  ಪಟ್ಟಿಯಿಂದ ಹೊರಗಿಟ್ಟಿರುವವರ ಸಂಖ್ಯೆ ಅತ್ಯಂತ ಕಡಿಮೆಯಾಗಿದ್ದರೆ ಭೂಮಿಪುತ್ರ ಜಿಲ್ಲೆಯಲ್ಲಿ ಅತ್ಯಧಿಕವಾಗಿದೆ. ಇದು ಹೇಗೆ ಸಾಧ್ಯ ?, ನಮಗೆ ಎನ್‍ಆರ್‍ಸಿಯಲ್ಲಿ ಇನ್ನು ಆಸಕ್ತಿ ಉಳಿದಿಲ್ಲ'' ಎಂದರು.

“ಬಾಂಗ್ಲಾದೇಶೀಯರನ್ನು ಹೊರಗಟ್ಟಲು ಎನ್‍ಆರ್‍ಸಿ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಹಾಗೂ  ಫೈನಲ್ ಅಲ್ಲ. ಸ್ವಲ್ಪ ಕಾಯಿರಿ, ಬಿಜೆಪಿ ಆಡಳಿತದಡಿಯಲ್ಲಿ ಇನ್ನೂ ಹೆಚ್ಚಿನ  ಫೈನಲ್ ಗಳನ್ನು ನೋಡಲಿದ್ದೀರಿ'' ಎಂದು ಅವರು ಹೇಳಿದರು.

“ಎನ್‍ಆರ್‍ಸಿಯಿಂದ ಯಾವುದೇ ಸಮಸ್ಯೆಯಾಗದಿರಲಿ ಎಂದು ನಾವು ಆಶಿಸುತ್ತೇವೆ. ಆದರೆ ಈ ಎನ್‍ಆರ್‍ಸಿಯಿಂದ ವಿದೇಶೀಯರನ್ನು ಹೊರಗಟ್ಟಲು ಸಾಧ್ಯವಿಲ್ಲ. ಅಕ್ರಮ ವಲಸಿಗರನ್ನು  ನಿಭಾಯಿಸಲು ಕೇಂದ್ರ ಹಾಗೂ ಅಸ್ಸಾಂ ಸರಕಾರ ಹೊಸ ತಂತ್ರಗಾರಿಕೆಯ ಕುರಿತಂತೆ  ಯೋಚಿಸುತ್ತಿದೆ” ಎಂದು ಅವರು ಹೇಳಿದರು.

ಇಂದು ಹೊರಬಿದ್ದ ಅಸ್ಸಾಂನ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ನ ಅಂತಿಮ ಪಟ್ಟಿಯಲ್ಲಿ 19 ಲಕ್ಷ ಮಂದಿಯನ್ನು ಹೊರಗಿಟ್ಟ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ಮಹತ್ವ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News