ವಾಹನ ಚಾಲಕರೇ, ನಾಳೆಯಿಂದ ನಿಯಮ ಉಲ್ಲಂಘನೆಗೆ ಭಾರೀ ದಂಡ, ಜೈಲು: ಯಾವ ತಪ್ಪಿಗೆ ಏನು ಶಿಕ್ಷೆ?

Update: 2019-08-31 11:52 GMT

ಹೊಸದಿಲ್ಲಿ, ಆ.31: ಮೋಟಾರು ವಾಹನಗಳ ತಿದ್ದುಪಡಿ ಕಾಯಿದೆ ನಾಳೆ (ಸೆಪ್ಟಂಬರ್ 1)ಯಿಂದ ಜಾರಿಗೊಳ್ಳಲಿದ್ದು, ಇನ್ನು ಮುಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ತಪ್ಪಿಸಿಕೊಳ್ಳುವುದು ಸುಲಭದ ಮಾತೇನಲ್ಲ. ಮದ್ಯದ ನಶೆಯಲ್ಲಿ ವಾಹನ ಚಲಾಯಿಸಿದರೆ ಅಥವಾ ಆ್ಯಂಬುಲೆನ್ಸ್ ಅಥವಾ ಅಗ್ನಿಶಾಮಕ ವಾಹನಕ್ಕೆ ದಾರಿ ಬಿಡದೇ ಇದ್ದರೆ 10,000 ರೂ. ದಂಡ ಅಥವಾ ಜೈಲು ಇಲ್ಲವೇ ಎರಡೂ ಶಿಕ್ಷೆಗಳನ್ನು ಎದುರಿಸಬೇಕಾಗಬಹುದು.

ಈ ಹೊಸ ತಿದ್ದುಪಡಿ ಕಾಯಿದೆ ವಾಹನ ತಯಾರಕರಿಗೆ, ವಾಹನ ಸವಾರರಿಗೆ ಹಾಗೂ ಕ್ಯಾಬ್ ಚಾಲಕರಿಗೂ ಕಠಿಣ ನಿಯಮಗಳನ್ನು  ಜಾರಿಗೆ ತಂದಿದ್ದು, ಸಂಚಾರ ನಿಯಮ ಪಾಲನೆ ಮೂಲಕ ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದೇ ಅದರ ಉದ್ದೇಶ.

ಈ ತಿದ್ದುಪಡಿ ಕಾಯಿದೆಯಂತೆ ಪ್ರತಿಯೊಂದು ಉಲ್ಲಂಘನೆಗೆ ಕಠಿಣ ದಂಡ ವಿಧಿಸಲಾಗುತ್ತದೆ. ಅದು ಸೀಟ್ ಬೆಲ್ಟ್ ಹಾಕದೇ ಇರುವುದು, ಅಪ್ರಾಪ್ತರು ವಾಹನ ಚಲಾಯಿಸಿದರೆ ಹೆತ್ತವರನ್ನು ಜವಾಬ್ದಾರರನ್ನಾಗಿಸುವುದು, ಅತಿ ವೇಗದ ಹಾಗೂ ನಿರ್ಲಕ್ಷ್ಯದ ವಾಹನ ಚಲಾವಣೆ, ವಿಮೆಯಿಲ್ಲದೆ ವಾಹನ ಚಲಾಯಿಸುವುದು,  ವಾಹನಗಳಲ್ಲಿ ಮಿತಿ ಮೀರಿ ಪ್ರಯಾಣಿಕರನ್ನು ತುಂಬಿಸುವುದು ಹೀಗೆ ಪ್ರತಿಯೊಂದು  ಉಲ್ಲಂಘನೆಗೆ ಕಠಿಣ ಶಿಕ್ಷೆ ಕಾದಿದೆ.

ಹೆಲ್ಮೆಟ್ ಧರಿಸದೇ ಇದ್ದ ದ್ವಿಚಕ್ರ ವಾಹನ ಸವಾರರು ರೂ 1,000 ದಂಡ ಪಾವತಿಸುವುದರ ಜತೆಗೆ ಮೂರು ತಿಂಗಳು ಲೈಸನ್ಸ್ ರದ್ದತಿಗೂ ಒಳಗಾಗುತ್ತಾರೆ. ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ, 5000 ರೂ. ದಂಡ ವಿಧಿಸಲಾಗುವುದು. ಅನರ್ಹಗೊಂಡರೂ ವಾಹನ ಚಲಾಯಿಸಿದರೆ 10 ಸಾವಿರ ರೂ. ಅತಿ ವೇಗದ ಚಾಲನೆಗೆ ಸಣ್ಣ ವಾಹನಗಳಿಗೆ 1000 ಮತ್ತು 2000 ರೂ., ಪ್ರಯಾಣಿಕ ಮತ್ತು ಗೂಡ್ಸ್ ವಾಹನಗಳಿಗೆ 2000 ರೂ.ಗಳಿಂದ 4000 ರೂ. ವಿಧಿಸಲಾಗುವುದು.

ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ 6 ತಿಂಗಳು ಜೈಲು ಮತ್ತು 10 ಸಾವಿರ ದಂಡ, 2ನೆ ಬಾರಿ ಇದೇ ತಪ್ಪು ಮಾಡಿದಲ್ಲಿ 2 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಲಾಗುವುದು.

ಈ ಕಾಯಿದೆಯನ್ವಯ ವಾಹನ ಸವಾರರಿಂದ ಹಿಡಿದು ವಾಹನ ತಯಾರಕರು ಹಾಗೂ ಗುತ್ತಿಗೆದಾರರೂ ಜವಾಬ್ದಾರರಾಗುತ್ತಾರೆ. ಉದಾಹರಣೆಗೆ ರಸ್ತೆ ನಿಮಾರ್ಣದಲ್ಲಿ ಗುಣಮಟ್ಟದ ಕೊರತೆಯಿಂದ ಅಪಘಾತವಾದರೆ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು, ಮೇಲಾಗಿ  ಸಂಬಂಧಿತ ನಿಯಮಗಳನ್ವಯ  ಜಾರಿ ಪ್ರಾಧಿಕಾರಗಳು ಮಾಡಿದ ತಪ್ಪಿಗೂ ದುಪ್ಪಟ್ಟು ದಂಡ ಪಾವತಿಸಬೇಕಾಗುತ್ತದೆ.

ವಾಹನ ಚಾಲನಾ ಪರೀಕ್ಷೆ ಹೆಚ್ಚು ತಂತ್ರಜ್ಞಾನ ಆಧರಿತವಾಗಲಿದ್ದು , ಭ್ರಷ್ಟಾಚಾರವನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದೆ. ಈಗಿನ ವ್ಯವಸ್ಥೆಯನ್ವಯ ಚಾಲನೆಯಲ್ಲಿ ಅನನುಭವಿಗೂ ಚಾಲನಾ ಪರವಾನಗಿ ಪಡೆದು ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆಯಿರುವುದರಿಂದ ತಂತ್ರಜ್ಞಾನ ಆಧರಿತ ಡ್ರೈವಿಂಗ್ ಲೈಸನ್ಸ್ ಒದಗಿಸುವ ವ್ಯವಸ್ಥೆಯಿಂದ ಸಾಕಷ್ಟು ಪ್ರಯೋಜವಾಗಲಿದೆ.

ಅಷ್ಟೇ ಅಲ್ಲದೆ ಈ ಮೋಟಾರು ವಾಹನಗಳ ತಿದ್ದುಪಡಿ ಕಾಯಿದೆಯನ್ವಯ  ದಂಡ ಮೊತ್ತವನ್ನು ವಾರ್ಷಿಕ ಶೇ 10ರಷ್ಟು ಏರಿಕೆ ಮಾಡುವ  ಅವಕಾಶವೂ ಇದ್ದು, ಇದರಿಂದಾಗಿ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಸಾಕಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News