×
Ad

ಮಕ್ಕಳ ಕಳವು ವದಂತಿ: ಉತ್ತರ ಪ್ರದೇಶದಲ್ಲಿ ನಿರಂತರ ಗುಂಪು ಹಲ್ಲೆಗಳು

Update: 2019-08-31 20:47 IST

ಲಕ್ನೋ,ಆ.31: ಉತ್ತರ ಪ್ರದೇಶದಲ್ಲಿ ನಡೆದ ಮೂರು ಪ್ರತ್ಯೇಕ ಘಟನೆಗಳಲ್ಲಿ ಮಕ್ಕಳ ಕಳ್ಳರು ಎಂಬ ವದಂತಿಯ ಹಿನ್ನೆಲೆಯಲ್ಲಿ ದಿಲ್ಲಿಯ ಓರ್ವ ನಿವಾಸಿ ಮತ್ತು ಭಿಕ್ಷುಕಿ ಸೇರಿದಂತೆ ಆರು ಮಂದಿ ಗುಂಪು ಹಲ್ಲೆಗೊಳಗಾಗಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರುವುದಾಗಿ ಪೊಲೀಸರು ಎಚ್ಚರಿಕೆ ನೀಡಿದರೂ ಗುಂಪು ಹಲ್ಲೆ ಘಟನೆಗಳು ನಡೆಯುತ್ತಿವೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಕೆಲವು ದಿನಗಳಿಂದ ರಾಜ್ಯದಲ್ಲಿ ಮಕ್ಕಳ ಕಳವು ವದಂತಿಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ದಾಳಿಗಳ ಸಂಖ್ಯೆ ಹೆಚ್ಚಾಗಿದೆ. ಇಂತಹ ವದಂತಿಗಳನ್ನು ಹರಡಿದ ಆರೋಪದಲ್ಲಿ ಈವರೆಗೆ 82 ಮಂದಿಯನ್ನು ಬಂಧಿಸಲಾಗಿದೆ. ಆದರೆ ಗುಂಪು ಹಲ್ಲೆಯ ಪ್ರಕರಣಗಳಲ್ಲಿ ಇಳಿಕೆಯಾಗಿಲ್ಲ ಎಂದು ಪೊಲೀಸ್ ಪ್ರಧಾನ ನಿರ್ದೇಶಕ ಒ.ಪಿ ಸಿಂಗ್ ಗುರುವಾರ ತಿಳಿಸಿದ್ದಾರೆ.

ಶುಕ್ರವಾರದಂದು ಮುಝಫ್ಫರ್‌ನಗರಕ್ಕೆ ಭೇಟಿ ನೀಡಿದ್ದ ದಿಲ್ಲಿ ನಿವಾಸಿಯನ್ನು ಆನಂದಪುರಿಯ ನಿವಾಸಿಗಳು ಮಕ್ಕಳ ಕಳ್ಳ ಎಂದು ಅನುಮಾನಿಸಿ ಹಲ್ಲೆ ನಡೆಸಿದ್ದಾರೆ. ಆದರೆ ತನಿಖೆಯ ವೇಳೆ ಆತ ಅಮಾಯಕ ಎನ್ನುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲಿಯದಲ್ಲಿ ಮಕ್ಕಳ ಕಳ್ಳಿ ಎಂದು ಆರೋಪಿಸಿ ಭಿಕ್ಷುಕಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ನಂತರ ಆಕೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಬಂಡದ ಅಟ್ಟರ ಟೌನ್‌ಶಿಪ್‌ನಲ್ಲಿ ನಾಲ್ಕು ಕಾರ್ಮಿಕರನ್ನು ಗುಂಪೊಂದು ಥಳಿಸಿದೆ. ಈ ಕಾರ್ಮಿಕರು ಲೋಹಿಯ ಕಾಲುವೆ ಸೇತುವೆಯ ಬಳಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅವರನ್ನು ಕಂಡು ಮಕ್ಕಳ ಕಳ್ಳರು ಎಂಬ ವದಂತಿ ಹರಡಲಾಗಿದೆ. ತಕ್ಷಣ ಗುಂಪು ಸೇರಿದ ಜನರು ಮಲಗಿದ್ದ ಕಾರ್ಮಿಕರ ಮೇಲೆ ದಾಳಿ ನಡೆಸಿದ್ದಾರೆ.

ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಳಿಗೊಳಗಾದವರನ್ನು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು ನಂತರ ಅವರನ್ನು ವಾಪಸ್ ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ. ಕಾರ್ಮಿಕರ ಮೇಲೆ ದಾಳಿ ನಡೆಸಿದವರ ಗುರುತು ಪತ್ತೆಯಾದಲ್ಲಿ ಅವರನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಯ್ ಬರೇಲಿಯಲ್ಲಿ ಇಂತಹ ನಾಲ್ಕು ಘಟನೆಗಳು ವರದಿಯಾಗಿದ್ದು ಒಂದು ಪ್ರಕರಣದಲ್ಲಿ 50 ಮಂದಿಯ ಗುಂಪೊಂದು ಖಾಸಗಿ ದೂರಸಂಪರ್ಕ ಸಂಸ್ಥೆಯ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿತ್ತು. ಘಟನೆಗೆ ಸಂಬಂಧಿಸಿ ಪೊಲೀಸರು ಕೆಲವು ಗ್ರಾಮಸ್ಥರನ್ನು ಬಂಧಿಸಿದ್ದಾರೆ. ಮಕ್ಕಳ ಕಳವು ವದಂತಿ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರಗಳಲ್ಲಿ ಕನಿಷ್ಟ 40 ಮಂದಿಯನ್ನು ಬಂಧಿಸಲಾಗಿದೆ ಎಂದು ಬುಲಂದ್‌ಶಹರ್ ಪೊಲೀಸ್ ವರಿಷ್ಠಾಧಿಕಾರಿ ಸಂತೋಶ್ ಕುಮಾರ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಗುರುವಾರದಂದು ವರದಕ್ಷಿಣೆ ಪ್ರಕರಣದ ತನಿಖೆ ನಡೆಸಲು ಸಾಮಾನ್ಯ ಬಟ್ಟೆ ತೊಟ್ಟು ಬರೇಲಿಗೆ ಭೇಟಿ ನೀಡಿದ್ದ ಪೊಲೀಸರನ್ನು ಮಕ್ಕಳ ಕಳ್ಳರು ಎಂದು ತಪ್ಪಾಗಿ ತಿಳಿದು ಹಲ್ಲೆ ನಡೆಸಲು ಮುಂದಾಗಿದ್ದ ಗುಂಪಿನಿಂದ ಸ್ಥಳೀಯ ಪೊಲೀಸರು ರಕ್ಷಿಸಿ ಸುರಕ್ಷಿತವಾಗಿ ವಾಪಸ್ ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News