ಗುಜರಾತ್: ದಲಿತರು,ಮುಸ್ಲಿಮರಿಗೆ ಆಸ್ತಿ ಮಾರದಂತೆ ಸದಸ್ಯರಿಗೆ ಸೂಚಿಸಿದೆ ಹೌಸಿಂಗ್ ಸೊಸೈಟಿ
ಹೊಸದಿಲ್ಲಿ,ಆ.31: ಗುಜರಾತ್ನ ನರ್ಮದಾ ಜಿಲ್ಲೆಯ ನಾಂದೋಡ್ ತಾಲೂಕಿನ ವಾಡಿಯಾ ಗ್ರಾಮದಲ್ಲಿರುವ ಹೌಸಿಂಗ್ ಸೊಸೈಟಿಯೊಂದು ಆಸ್ತಿಗಳನ್ನು ದಲಿತರು ಮತ್ತು ಮುಸ್ಲಿಮರಿಗೆ ಮಾರಾಟ ಮಾಡದಂತೆ ತನ್ನ ಸದಸ್ಯರಿಗೆ ಸೂಚಿಸಿದೆ. ಸೊಸೈಟಿಯು ಹೊರಡಿಸಿರುವ ಕರಪತ್ರದಲ್ಲಿಯ ಹಲವಾರು ‘ಸಲಹೆ ’ಗಳಲ್ಲಿ ಇದೂ ಒಂದಾಗಿದ್ದು,ಇವೆಲ್ಲ ಸಭೆಯಲ್ಲಿ ಚರ್ಚೆಯಾಗಬೇಕಾದ ಅಜೆಂಡಾದ ಭಾಗವಾಗಿವೆ ಎಂದು ಸೊಸೈಟಿಯು ನಂತರ ಹೇಳಿಕೊಂಡಿದೆ.
ಮುಂಬರುವ ಉತ್ಸವಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಸ್ತಿಗಳ ಮಾರಾಟದ ಮೇಲೆ ವಿಧಿಸಬೇಕಾದ ಶುಲ್ಕಗಳ ಕುರಿತು ಚರ್ಚೆಯ ಜೊತೆಗೆ ಸದಸ್ಯರು ‘ದಲಿತರು ಮತ್ತು ಮುಸ್ಲಿಮರಿಗೆ ಆಸ್ತಿ ಮಾರಾಟದಿಂದ ದೂರವಿರಬೇಕು ’ ಎಂದು ಕರಪತ್ರದಲ್ಲಿ ಹೇಳಲಾಗಿದೆ.
ದಲಿತ ಸಮುದಾಯದ ಸದಸ್ಯರು ಜಿಲ್ಲಾಧಿಕಾರಿ ಐ.ಕೆ.ಪಟೇಲ್ ಅವರನ್ನು ಭೇಟಿಯಾಗಿ ಜಾತಿ ಆಧರಿತ ತಾರತಮ್ಯದ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ದೂರಿನ ಬಗ್ಗೆ ಉತ್ತರಿಸುವಂತೆ ಸೊಸೈಟಿಗೆ ಸೂಚಿಸಲಾಗಿದ್ದು,ಕರಪತ್ರವು ತನ್ನ ಸಭೆಯಲ್ಲಿ ಚರ್ಚೆಯಾಗಬೇಕಿರುವ ಅಜೆಂಡಾದ ಕರಡು ಪ್ರತಿಯಾಗಿದೆ. ದಲಿತರು ಮತ್ತು ಮುಸ್ಲಿಮರಿಗೆ ಆಸ್ತಿಗಳನ್ನು ಮಾರಾಟ ಮಾಡದಂತೆ ತಾನು ನಿಯಮವನ್ನು ಹೊರಡಿಸುತ್ತಿಲ್ಲ, ಆದರೆ ಕರಪತ್ರದಲ್ಲಿಯ ವಿಷಯಗಳ ಪಟ್ಟಿಯನ್ನು ಸದಸ್ಯರು ನೀಡಿದ್ದ ಸಲಹೆಗಳನ್ನು ಆಧರಿಸಿ ರೂಪಿಸಲಾಗಿದೆ ಎಂದು ಅದು ತಿಳಿಸಿದೆ. ಈ ಸ್ಪಷ್ಟನೆಯನ್ನು ನಾವು ಒಪ್ಪಿಕೊಂಡಿದ್ದೇವೆ ಮತ್ತು ಈ ವಿಷಯದಲ್ಲಿ ನಿಗಾಯಿರಿಸುತ್ತೇವೆ. ಜಾತಿ ತಾರತಮ್ಯ ನಡೆದರೆ ಕ್ರಮವನ್ನು ಜರುಗಿಸುತ್ತೇವೆ ಎಂದು ಪಟೇಲ್ ಸುದ್ದಿಗಾರರಿಗೆ ತಿಳಿಸಿದರು.
ಇದರಲ್ಲಿಯ ವಿಷಯಗಳು ಸೊಸೈಟಿಯು ತನ್ನ ಸಭೆಯಲ್ಲಿ ಅಂಗೀಕರಿಸಿರುವ ನಿರ್ಣಯಗಳಾಗಿದ್ದು,ಎಲ್ಲ ಸದಸ್ಯರು ಇದಕ್ಕೆ ಬದ್ಧರಾಗಬೇಕಾಗುತ್ತದೆ ಎಂದೂ ಕರಪತ್ರದಲ್ಲಿ ಉಲ್ಲೇಖಿಸಿರುವುದರಿಂದ ಸೊಸೈಟಿಯ ಸ್ಪಷ್ಟನೆಯು ಪ್ರಶ್ನಾರ್ಹವಾಗಿದೆ.
ಮನೆಗಳ ಮಾಲಿಕರು ದಲಿತರು ಮತ್ತು ಮುಸ್ಲಿಮರಿಗೆ ಬಾಡಿಗೆಗೆ ನೀಡಲು ನಿರಾಕರಿಸಿರುವ ಹಲವಾರು ವಿವಾದಗಳು ರಾಜ್ಯದಲ್ಲಿ ನಡೆದಿವೆ. 2016ರಲ್ಲಿ ವಸತಿ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಲೈಲಾನಿ ಫರಾ ಅವರು, ಗುಜರಾತನಲ್ಲಿ ವಸತಿಗೆ ಸಂಬಂಧಿಸಿದಂತೆ ಶೋಷಿತ ಗುಂಪುಗಳು ತಾರತಮ್ಯಕ್ಕೊಳಗಾಗಿವೆ ಎಂದು ತನ್ನ ವರದಿಯಲ್ಲಿ ಹೇಳಿದ್ದರು.