ಚುನಾವಣಾ ಆಯೋಗದ ಬೃಹತ್ ಮತದಾರರ ದೃಢೀಕರಣ ಕಾರ್ಯಕ್ರಮಕ್ಕೆ ಸೆ.1ಕ್ಕೆ ಚಾಲನೆ
ಹೊಸದಿಲ್ಲಿ,ಆ.31: ಸಮೂಹ ಸಂಪನ್ಮೂಲದ ಮೂಲಕ ಮತದಾರರ ಪಟ್ಟಿಗಳ ಪರಿಷ್ಕರಣೆಗಾಗಿ ಚುನಾವಣಾ ಆಯೋಗವು ಹಮ್ಮಿಕೊಂಡಿರುವ ಬೃಹತ್ ಮತದಾರರ ದೃಢೀಕರಣ ಕಾರ್ಯಕ್ರಮ (ಇವಿಪಿ)ವು ಸೆಪ್ಟೆಂಬರ್ 1ರಿಂದ ದೇಶಾದ್ಯಂತ ಆರಂಭಗೊಳ್ಳಲಿದೆ.
ಈ ಕಾರ್ಯಕ್ರಮದಡಿ ಪ್ರತಿ ಕುಟುಂಬದ ಓರ್ವ ಮತದಾರ ವ್ಯಕ್ತಿಗೆ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್‌ನ್ನು ಒದಗಿಸಿ ಮತದಾರರ ನೋಂದಣಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಮತ್ತು ತನ್ನ ಕುಟುಂಬ ಸದಸ್ಯರ ಕುರಿತು ಇಂತಹುದೇ ವಿವರಗಳನ್ನು ಟ್ಯಾಗ್ ಮಾಡಲು ಅವಕಾಶವನ್ನು ಕಲ್ಪಿಸಲಾಗುವುದು ಎಂದು ದಿಲ್ಲಿ ಮುಖ್ಯ ಚುನಾವಣಾಧಿಕಾರಿ ರಣಬೀರ ಸಿಂಗ್ ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವಿವರಗಳನ್ನು ಬಳಿಕ ಬ್ಲಾಕ್ ಮಟ್ಟದ ಅಧಿಕಾರಿಗಳು ಪರಿಶೀಲಿಸಿ ದೃಢೀಕರಿಸುತ್ತಾರೆ. ಇದರಿಂದ ಬಹಳಷ್ಟು ಸಮಯ ಉಳಿತಾಯವಾಗಲಿದೆ. ಮತದಾರರ ಪಟ್ಟಿಗಳ ವಿವರಗಳನ್ನು ಪರಿಶೀಲಿಸಿ ಸ್ವಯಂ ಪ್ರಮಾಣೀಕರಿಸಲು ಮತ್ತು ಬಳಿಕ ಯಾವದೇ ತಪ್ಪುಗಳಿದ್ದರೆ ಅದನ್ನು ಸರಿಪಡಿಸಲು ಮತದಾರರಿಗೆ ಸಾಧ್ಯವಾಗಿಸುವುದೂ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
2020,ಜ.1ರ ಕಟ್-ಆಫ್ ದಿನಾಂಕದೊಂದಿಗೆ ಸಂಕಿಪ್ತ ಪರಿಷ್ಕರಣೆಯನ್ನು ಪ್ರಕಟಿಸಲಾಗುವುದು ಮತ್ತು ಅಂತಿಮ ಮತದಾರರ ಪಟ್ಟಿಗಳನ್ನು ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಕಟಿಸಲಾಗುವುದು ಎಂದರು. ಇವಿಪಿ ಕಾರ್ಯಕ್ರಮವನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ಗಳಲ್ಲಿ ನಡೆಸಲಾಗುವುದು ಎಂದ ಸಿಂಗ್,ಮತದಾರರ ವಿವರಗಳ ಪ್ರಮಾಣೀಕರಣಕ್ಕಾಗಿ ಈಗಾಗಲೇ ಬಳಕೆಯಲ್ಲಿರುವ ಪಾಸ್‌ಪೋರ್ಟ್,ವಾಹನ ಚಾಲನೆ ಪರವಾನಿಗೆಯಂತಹ ಏಳು ದಾಖಲೆಗಳ ಜೊತೆಗೆ ಪಾನ್ ಕಾರ್ಡ್,ಎನ್‌ಪಿಆರ್‌ನಿಂದ ನೀಡಲಾದ ಸ್ಮಾರ್ಟ್ ಕಾರ್ಡ್ ಮತ್ತು ಇತ್ತೀಚಿನ ನೀರು,ದೂರವಾಣಿ,ವಿದ್ಯುತ್,ಅಡುಗೆ ಅನಿಲ ಸಂಪರ್ಕದ ಬಿಲ್‌ಗಳನ್ನೂ ಅಂಗೀಕರಿಸಲು ಚುನಾವಣಾ ಆಯೋಗವು ನಿರ್ಧರಿಸಿದೆ ಎಂದು ತಿಳಿಸಿದರು.