ಪತ್ರಿಕಾ ಮಂಡಳಿಯ ಸಲ್ಲದ ನಡೆ

Update: 2019-08-31 18:39 GMT

ಇಂದು, ಪತ್ರಿಕಾ ವೃತ್ತಿಧರ್ಮದ ಶೀಲ, ಗುಣಮಟ್ಟಗಳು ಕುಸಿಯುತ್ತಿರುವ ಆತಂಕಕಾರಿ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸಂಕುಚಿತ ಅರ್ಥದ ರಾಷ್ಟ್ರಪರಿಕಲ್ಪನೆಯನ್ನು ಬೆಂಬಲಿಸುವಂತೆ ಸರಕಾರ ಒತ್ತಡ ಹೇರುತ್ತಿರುವ ದಿನಗಳು. ಸತ್ಯವನ್ನು ವರದಿ ಮಾಡಬೇಕಾದ ಪತ್ರಿಕೆಗಳು ಇಂತಹ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಅದಕ್ಕೆ ನೈತಿಕಶಕ್ತಿಯಾಗಿ ನಿಲ್ಲಬೇಕಾದ ಪತ್ರಿಕಾ ಮಂಡಳಿ ಸರಕಾರದ ಪತ್ರಿಕಾ ಸ್ವಾತಂತ್ರ್ಯ ದಮನ ನೀತಿಯನ್ನು ಬೆಂಬಲಿಸಲು ಸುಪ್ರೀಂ ಕೋರ್ಟಿನ ಮಾರ್ಗ ಹಿಡಿದಿರುವುದು ಅಕ್ರಮವನ್ನು ಸಕ್ರಮಗೊಳಿಸುವ ಆತಂಕಕಾರಿ ನಡೆ.


ವಾಕ್ ಸ್ವಾತಂತ್ರ್ಯ ಮತ್ತು ಲೇಖನಿ ಸ್ವರಾಜ್ಯದ ಅಸ್ತಿಭಾರ ಶಿಲೆಯಿದ್ದಂತೆ. ಈ ಅಸ್ತಿಭಾರ ಶಿಲೆ ಗಂಡಾಂತರಕ್ಕೆ ಸಿಲುಕಿದಲ್ಲಿ ಈ ಅಖಂಡ ಶಿಲೆಯನ್ನು ರಕ್ಷಿಸಲು ನೀವು ನಿಮ್ಮ ಶಕ್ತಿಯನ್ನೆಲ್ಲ ಪ್ರಯೋಗಿಸಬೇಕಾಗುತ್ತದೆ ಎಂದಿದ್ದಾರೆ ಮಹಾತ್ಮಾ ಗಾಂಧಿಯವರು. ಈ ಮಾತಿನಂತೆ ನಡೆದುಕೊಳ್ಳಬೇಕಾದ ಎರಡು ಸಂದರ್ಭ ಸ್ವತಂತ್ರ ಭಾರತದಲ್ಲಿ ಒದಗಿ ಬಂದಿತ್ತು. ಮೊದಲನೆಯ ಸಂದರ್ಭ 1975ರ ಜೂನ್ ತಿಂಗಳಲ್ಲಿ ಆಗಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಪತ್ರಿಕೆಗಳ ಮೇಲೆ ಸೆನ್ಸಾರ್ ಹೇರಿದಾಗ ಒದಗಿ ಬಂದಿತ್ತು. 1987ರಲ್ಲಿ ರಾಜೀವ್ ಗಾಂಧಿಯವರು ಬೋಫೊರ್ಸ್ ಫಿರಂಗಿ ಹಗರಣ ಬಯಲಾದಂತೆ ಮಾನನಷ್ಟ ವಿರೋಧಿ ಮಸೂದೆಯನ್ನು ಕಾನೂನುಬದ್ಧಗೊಳಿಸುವ ಮೂಲಕ ಪತ್ರಿಕೆಗಳ ಬಾಯಿಕಟ್ಟಲು ಪ್ರಯತ್ನಿಸಿದರು. ಈ ಎರಡೂ ಸಂದರ್ಭಗಳಲ್ಲಿ ಪತ್ರಕರ್ತರು ತಮ್ಮದೇ ಆದ ರೀತಿಯಲ್ಲಿ ಹೋರಾಟ ನಡೆಸಿ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡದ್ದು ಈಗ ಇತಿಹಾಸ. ಭಾರತದಲ್ಲಿ ಪತ್ರಿಕೋದ್ಯಮದ ಹಿತಾಸಕ್ತಿ ಮತ್ತು ಪತ್ರಿಕಾ ಸ್ವಾತಂತ್ರವನ್ನು ರಕ್ಷಿಸಲೆಂದೇ ಸ್ಥಾಪಿತವಾಗಿರುವ ಭಾರತೀಯ ಪತ್ರಿಕಾ ಮಂಡಲಿಯೇ ಈಗ ರಾಷ್ಟ್ರ ಹಿತದ ನೆಪದಲ್ಲಿ ಪತ್ರಿಕೆಗಳ ಬಾಯಿ ಮುಚ್ಚಿಸುವ ಕ್ರಮಕ್ಕೆ ಮುಂದಾಗಿರುವುದರಿಂದ ಪತ್ರಿಕಾ ವ್ಯವಸಾಯ ಮತ್ತೊಮ್ಮೆ ಗಂಡಾಂತರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

 ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಸರಕಾರ ಎಲ್ಲ ಸಂವಹನ ಮೂಲಗಳನ್ನೂ ಬಂದ್ ಮಾಡಿದ ಪರಿಣಾಮವಾಗಿ ಪತ್ರಿಕೆಗಳು ಹೊರಬರುವುದೇ ಕಷ್ಟವಾಯಿತು. ಸಂವಹನ ಮತ್ತು ಸಂಪರ್ಕ ಮಾರ್ಗೋಪಾಯಗಳನ್ನೂ ಸಾಧನಗಳನ್ನೂ ಬಂದ್ ಮಾಡಿದ್ದರಿಂದಾಗಿ ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಯ ಹಕ್ಕುಗಳನ್ನು ನಿಗ್ರಹಿಸಿದಂತಾಗಿದೆ. ಆದ್ದರಿಂದ ಕಾಶ್ಮೀರವನ್ನು ಈ ಬಂದ್‌ನಿಂದ ಮುಕ್ತಗೊಳಿಸುವಂತೆ ಕೋರಿ ‘ಕಾಶ್ಮೀರ ಟೈಮ್ಸ್’ ಪತ್ರಿಕೆಯ ಸಂಪಾದಕಿ ಅನುರಾಧಾ ಭಾಸಿನ್ ಸುಪ್ರೀಂ ಕೋರ್ಟಿಗೆ ಅರ್ಜಿಸಲ್ಲಿಸಿರುವುದು ಸರಿಯಷ್ಟೆ. ಈ ಅರ್ಜಿ ವಿಚಾರಣೆ ಸಮಯದಲ್ಲಿ ತನ್ನ ವಾದವನ್ನೂ ಕೇಳಬೇಕೆಂದು ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿರುವ ಭಾರತೀಯ ಪತ್ರಿಕಾ ಮಂಡಳಿ ಜಮ್ಮು ಕಾಶ್ಮೀರದಲ್ಲಿ ಹೇರಲಾಗಿರುವ ಸರಕಾರದ ಸಂವಹನ ಸಂಪರ್ಕ ಜಾಲ ರದ್ದತಿಯ ಕ್ರಮಗಳನ್ನು ಸಮರ್ಥಿಸಿಕೊಂಡಿದೆ. ಈ ಸಲ್ಲದ ನಡೆಯಿಂದಾಗಿ ಪತ್ರಿಕಾ ಮಂಡಳಿ ಈಗ ಸುದ್ದಿಯಲ್ಲಿದೆ. ಇದರಿಂದಾಗಿ ‘ಹರ ಕೊಲ್ಲಲ್ ಪರಕಾಯ್ವನೆ’ ಎಂಬಂತಾಗಿದೆ ದೇಶದ ಪತ್ರಿಕೆಗಳ ಸ್ಥಿತಿ. ಸ್ವಾತಂತ್ರ್ಯಾನಂತರ ಭಾರತೀಯ ಪತ್ರಿಕೋದ್ಯಮದ ಸ್ಥಿತಿಗತಿಯ ಅಧ್ಯಯನಕ್ಕೆ ರಚಿಸಲಾದ ಪತ್ರಿಕಾ ಆಯೋಗದ ಶಿಫಾರಸಿನ ಅನ್ವಯ 1954ರಲ್ಲೇ ಪ್ರಥಮ ಭಾರತೀಯ ಪತ್ರಿಕಾ ಮಂಡಳಿ ಅಸ್ತಿತ್ವಕ್ಕೆ ಬಂದಿತಾದರೂ ಇಂದಿರಾಗಾಂಧಿಯವರ ಸರಕಾರ 1976ರಲ್ಲಿ ಸುಗ್ರೀವಾಜ್ಞೆ ಮೂಲಕ ಅದನ್ನು ಅಸಿಂಧುಗೊಳಿಸಿತು.

ನಂತರ ಪತ್ರಿಕೆಗಳ ಸ್ವಾತಂತ್ರ್ಯ ಮತ್ತು ಪತ್ರಿಕೆಗಳ ಗುಣಮಟ್ಟವನ್ನು ಸುಧಾರಿಸುವ ದೃಷ್ಟಿಯಿಂದ 1978ರಲ್ಲಿ ಪತ್ರಕರ್ತರ ನಡಾವಳಿ ಸಂಹಿತೆ ಸಹಿತ ಭಾರತೀಯ ಪತ್ರಿಕಾ ಮಂಡಳಿಯನ್ನು ಮತ್ತೆ ರಚಿಸಲಾಯಿತು.ಕೇಂದ್ರದಲ್ಲಿ ಬಿಜೆಪಿ ಸರಕಾರ ಬರುವವರೆಗೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿದ್ದರು. 2015ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈಗಿನ ಅಧ್ಯಕ್ಷ ಚಂದ್ರಕುಮಾರ್ ಪ್ರಸಾದ್ ಜೈನ್ ಅವರನ್ನು ನೇಮಕಮಾಡಲಾಯಿತು. ಶಾಸನಬದ್ಧ ಸ್ವಾಯತ್ತ ಸಂಸ್ಥೆಯಾದ ಪತ್ರಿಕಾ ಮಂಡಳಿಯ ಅಧಿಕಾರ ಮತ್ತು ಕರ್ತವ್ಯಗಳನ್ನು ಹೀಗೆ ನಿರೂಪಿಸಲಾಗಿದೆ:

‘‘ಪತ್ರಿಕೆಗಳ ಸ್ವಾತಂತ್ರವನ್ನು ಕಾಪಾಡುವುದು ಹಾಗೂ ಪತ್ರಿಕೆಗಳು ಮತ್ತು ವಾರ್ತಾ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸುವುದು ಪತ್ರಿಕಾ ಮಂಡಳಿಯ ರಚನೆಯ ಹಿಂದಿರುವ ಮುಖ್ಯ ಉದ್ದೇಶ. ಪತ್ರಿಕಾ ಸ್ವಾತಂತ್ರ್ಯ ರಕ್ಷಿಸಿಕೊಳ್ಳುವುದರಲ್ಲಿ ಹಾಗೂ ಪತ್ರಿಕಾ ವೃತ್ತಿಯ ಗುಣಮಟ್ಟ ಎತ್ತಿಹಿಡಿಯುವುದರಲ್ಲಿ ಪತ್ರಿಕಾ ಮಂಡಳಿ ಪತ್ರಕರ್ತರಿಗೆ ಸಹಾಯಮಾಡುತ್ತದೆ. ಪತ್ರಕರ್ತರಿಗಾಗಿ ನೀತಿ ಸಂಹಿತೆ ರಚನೆಯೂ ಪತ್ರಿಕಾ ಮಂಡಳಿಯ ಹೊಣೆಯಾಗಿದೆ.ಸಾರ್ವಜನಿಕರ ಅಭಿರುಚಿ ಮಟ್ಟವನ್ನು ಕಾಪಾಡಿಕೊಂಡು ಬರುವುದು ಹಾಗೂ ಪತ್ರಕರ್ತರಲ್ಲಿ ಹೊಣೆಗಾರಿಕೆಯ ಪ್ರಜ್ಞೆ ಮತ್ತು ಸೇವಾ ಮನೋಭಾವವನ್ನು ಪ್ರೇರೇಪಿಸುವುದು ಪತ್ರಿಕಾ ಮಂಡಳಿಯ ಕರ್ತವ್ಯವಾಗಿದೆ. ಸಾರ್ವಜನಿಕ ಮಹತ್ವದ ಸುದ್ದಿಗಳನ್ನು ವಾರ್ತಾ ಪತ್ರಿಕೆಗಳು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸುತ್ತಿವೆಯೇ ಎಂಬುದರ ಉಸ್ತುವಾರಿಯೂ ಪತ್ರಿಕಾ ಮಂಡಳಿಯ ಹೊಣೆಯಾಗಿದೆ.’’

ಇದು ಭಾರತೀಯ ಪತ್ರಿಕಾ ಮಂಡಳಿ ರಚನೆಯ ಹಿಂದಿನ ಮುಖ್ಯ ಧ್ಯೇಯೋದ್ದೇಶ. ಹೀಗಾಗಿ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ ಹಾಗೂ ಪ್ರಜೆಗಳಿಗೆ ಅಡೆತಡೆಯಿಲ್ಲದೆ ಸುದ್ದಿಸಮಾಚಾರ ತಲುಪುವಂತೆ ನೋಡಿಕೊಳ್ಳುವುದು ಪತ್ರಿಕಾ ಮಂಡಳಿಯ ಶಾಸನ ಬದ್ಧ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ಆದರೆ, ‘ಕಾಶ್ಮೀರ ಟೈಮ್ಸ್’ ಪತ್ರಿಕೆಯ ಸಂಪಾದಕಿ ಅನುರಾಧಾ ಭಾಸಿಲ್ ಅವರು ಸಂವಹನಾ ಸಂಪರ್ಕ ಜಾಲ ರದ್ದುಪಡಿಸಿರುವ ಸರಕಾರದ ಕ್ರಮಗಳಿಂದ ಸಂವಿಧಾನದತ್ತವಾದ ತಮ್ಮ ಸ್ವಾತಂತ್ರ್ಯ ಹರಣವಾಗಿದೆಯೆಂದೂ ತಮ್ಮ ಕರ್ತವ್ಯ ನಿರ್ವಹಣೆಗೆ ಅಡಚಣೆಯುಂಟಾಗಿದೆಯೆಂದೂ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿಯ ಪರ ನಿಲ್ಲಬೇಕಾದ ಮಂಡಳಿ ಸರಕಾರದ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗಿರುವುದರಿಂದ, ಬೇಲಿಯೇ ಎದ್ದು ಹೊಲ ಮೇಯುವಂಥ ಪರಿಸ್ಥಿತಿ ಉದ್ಭವಿಸಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ಹೊಣೆ ಹೊತ್ತಿರುವ ಈ ಸ್ವಾಯತ್ತ ಸಂಸ್ಥೆ ದೇಶದ ‘ಸಮಗ್ರತೆ ಮತ್ತು ಸಾರ್ವಭೌಮತ್ವದ ಹಿತಾಸಕ್ತಿಯಿಂದ ಜಾರಿಗೆ ತರಲಾಗಿದೆ’ ಎನ್ನಲಾಗಿರುವ ಸಂವಹನ ಮತ್ತು ಸಂಪರ್ಕ ಜಾಲಗಳ ಸೇವೆಯನ್ನು ರದ್ದುಪಡಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವುದು ಅದರ ಮೂಲ ಉದ್ದೇಶಕ್ಕೆ ಭಂಗತರುವಂತಹ ಕ್ರಮವಾಗಿದೆ. ಮುಕ್ತ ಸಮಾಜ ಮತ್ತು ಪತ್ರಿಕಾ ಸ್ವಾತಂತ್ರ್ಯ ರಾಷ್ಟ್ರದ ಸಮಗ್ರತೆ ಮತ್ತು ಸಾರ್ವಭೌಮತ್ವಗಳಿಗೆ ಧಕ್ಕೆ ತರಲಿದೆ ಎಂಬ ವಿಚಾರಧಾರೆಯೇ ದಬ್ಬಾಳಿಕೆಯ, ಪ್ರಜಾಪೀಡನೆಯ ಪ್ರವೃತ್ತಿಯದು. ಇಂಥದೊಂದು ಪರಿಕಲ್ಪನೆಯನ್ನು ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡುವ ಹೊಣೆಗಾರಿಕೆ ಹೊತ್ತಿರುವ ಶಾಸನಬದ್ಧ ಸ್ವಾಯ್ತತ ಸಂಸ್ಥೆ ನ್ಯಾಯಾಲಯದ ಮುಂದೆ ಪ್ರತಿಪಾದಿಸಲು ಹೊರಟಿರುವುದು ಆಘಾತಕಾರಿಯಾದ ಬೆಳವಣಿಗೆಯೇ ಸರಿ.

ಪ್ರಜಾಸತ್ತಾತ್ಮಕ ಸಮಾಜದಲ್ಲಿ ಪತ್ರಿಕೆಗಳು ಸ್ವತಂತ್ರವಾಗಿ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸುವುದನ್ನು ಕಾವಲು ಕಾಯಕದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಜವಾಬ್ದಾರಿಯುಳ್ಳ ಪತ್ರಿಕಾ ಮಂಡಳಿಯ ಈ ಕ್ರಮ ಅದರ ಮೂಲ ಧ್ಯೇಯೋದ್ದೇಶಗಳಿಗೆ ವ್ಯತಿರಿಕ್ತವಾದುದು. ಕಾಶ್ಮೀರದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರಮವನ್ನು ಸಮರ್ಥಿಸುವ ಪತ್ರಿಕಾ ಮಂಡಳಿಯ ನಿಲುವಿಗೆ ಸಹಜವಾಗಿಯೇ ಪತ್ರಿಕೋದ್ಯಮದಿಂದ ವಿರೋಧ ವ್ಯಕ್ತವಾಗಿದೆ. ಪತ್ರಿಕಾ ಮಂಡಳಿಯ ಈ ಕ್ರಮ ಅಸಮರ್ಥನೀಯವಾದುದು ಎಂದು ಎಡಿಟರ್ಸ್‌ ಗಿಲ್ಡ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘಟನೆಗಳು ಖಂಡಿಸಿವೆ. ಜಮ್ಮು ಕಾಶ್ಮೀರದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸರಕಾರದ ಕ್ರಮಗಳನ್ನು ಬೆಂಬಲಿಸಿ ಸುಪ್ರೀಂ ಕೋರ್ಟಿಗೆ ಏಕಪಕ್ಷೀಯವಾಗಿ ಸಲ್ಲಿಸಿರುವ ಅರ್ಜಿಯನ್ನು ಅಧ್ಯಕ್ಷ ಪ್ರಸಾದ್ ಅವರು ಹಿಂದೆಗೆದುಕೊಳ್ಳಬೇಕೆಂದು ದೇಶದೆಲ್ಲೆಡೆಯಿಂದ ಹಿರಿಯ ಪತ್ರಕರ್ತರು ಆಗ್ರಹ ಪಡಿಸಿದ್ದಾರೆ. ಭಾರತೀಯ ಪತ್ರಿಕಾ ಮಂಡಳಿಯ ಪ್ರಥಮ ಅಧ್ಯಕ್ಷರಾದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿ.ಬಿ.ಸಾವಂತ್ ಅವರು ಪತ್ರಿಕಾ ಮಂಡಳಿಯ ಈ ಕ್ರಮವನ್ನು ‘ದುರದೃಷ್ಟಕರ’ ಎಂದು ಬಣ್ಣಿಸಿದ್ದಾರೆ. ಇದರಲ್ಲಿನ ಆತಂಕಕಾರಿಯಾದ ಮತ್ತೊಂದು ಸಂಗತಿ ಎಂದರೆ ಪತ್ರಿಕಾ ಮಂಡಳಿಯ ಅಧ್ಯಕ್ಷರು ಮಂಡಳಿಯ ಸದಸ್ಯರ ಗಮನಕ್ಕೆ ತರದೇ ಸುಪ್ರೀಂ ಕೋರ್ಟಿನಲ್ಲಿ ಸರಕಾರದ ಕ್ರಮವನ್ನು ಸಮರ್ಥಿಸಲು ಮುಂದಾಗಿರುವುದು. ಅಧ್ಯಕ್ಷರ ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ಸದಸ್ಯರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಲ್ಲಿ ಪತ್ರಕರ್ತರು ತಮ್ಮ ಕರ್ತವ್ಯ ಪಾಲನೆಯಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಸುಪ್ರೀಂ ಕೋರ್ಟಿನ ಗಮನಕ್ಕೆ ತರುವುದರಲ್ಲಿ ಪತ್ರಿಕಾ ಮಂಡಳಿ ವಿಫಲವಾಗಿದೆಯೆಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರು ಕಾಶ್ಮೀರದಲ್ಲಿನ ಪರಿಸ್ಥಿತಿಯ ಅಧ್ಯಯನಕ್ಕಾಗಿ ಮಂಡಳಿಯ ಸದಸ್ಯರ ತಂಡವೊಂದನ್ನು ಕಳುಹಿಸುವ ಮಾತನ್ನಾಡಿರುವುದು ಕಣ್ಣೊರೆಸುವ ತಂತ್ರವಷ್ಟೆ.

ಏಕಪಕ್ಷೀಯವಾಗಿ ಪತ್ರಿಕಾ ಮಂಡಲಿ ಅಧ್ಯಕ್ಷರು ಸಲ್ಲಿಸಿರುವ, ಸರಕಾರದ ಕ್ರಮವನ್ನು ಬೆಂಬಲಿಸುವ ಅರ್ಜಿಯನ್ನು ರಾಷ್ಟ್ರಹಿತ ದೃಷ್ಟಿಯಿಂದ ಸಲ್ಲಿಸಲಾಗಿದೆಯೆಂದೂ ಪತ್ರಿಕಾ ಸ್ವಾತಂತ್ರ್ಯಕ್ಕೆ ತಾವು ಬದ್ಧರೆಂದೂ ಈಗ ರಾಗ ಬದಲಾಯಿಸಿದ್ದಾರೆ. ‘‘ವ್ಯಕ್ತಿ ಸ್ವಾತಂತ್ರ ಮತ್ತು ರಾಷ್ಟ್ರೀಯ ಹಿತ ಇವೆರಡರ ನಡುವೆ ಮುಖಾಮುಖಿ ಸಂಘರ್ಷ ಉಂಟಾದಾಗ ಯಾವುದು ಹೆಚ್ಚು ಪ್ರಾಧಾನ್ಯ ಪಡೆಯಬೇಕೆಂಬುದು ತಮ್ಮ ಕಾಳಜಿಯಾಗಿದೆ’’ಯೆಂದು ಅವರು ತಮ್ಮ ಕ್ರಮಕ್ಕೆ ಸಮಜಾಯಿಷಿಯನ್ನೂ ನೀಡಿದ್ದಾರೆ. ಅವರ ಈ ಮಾತು ಯಾವುದು ರಾಷ್ಟ್ರಹಿತ, ಯಾವುದು ಜನಹಿತ ಎಂಬ ಪ್ರಶ್ನೆಗೆ ಎಡೆಮಾಡಿಕೊಡುತ್ತದೆ. ಪ್ರಜೆಗಳ ಸ್ವಾತಂತ್ರ್ಯಕ್ಕೆ ಮೀರಿದ ರಾಷ್ಟ್ರಹಿತ ಎಂಬುದೊಂದುಂಟೇ? ಪ್ರಜೆಗಳಿಂದ ರಾಷ್ಟ್ರವಲ್ಲವೇ? ಕೇವಲ ಭೌಗೋಳಿಕ ಪ್ರದೇಶವೊಂದೇ ರಾಷ್ಟ್ರವಾಗಲು ಸಾಧ್ಯವೇ? ಪತ್ರಿಕಾ ಸ್ವಾತಂತ್ರ್ಯವೂ ಪ್ರಜೆಗಳೆಲ್ಲರ ಸ್ವಾತಂತ್ರ್ಯವೇ ಆಗಿದೆ. ಡಿ.ವಿ.ಜಿ.ಯವರು ಹೇಳುವಂತೆ ಸ್ವಾತಂತ್ರ್ಯ ಪತ್ರಕರ್ತರಿಗೆ ಮಾತ್ರ ಸಂಬಂಧಪಟ್ಟ ಹಕ್ಕಲ್ಲ. ಪತ್ರಕರ್ತರು ಸ್ವತಂತ್ರರಾಗಿದ್ದರೆ ಅದರ ಪ್ರಯೋಜನವಾಗುವುದು ಪ್ರಜೆಗಳಿಗೆ. ಅವರು ಪರಾಧೀನರಾದರೆ ಅದರ ಬಾಧೆಯು ಪ್ರಜೆಗಳಿಗೂ ತಗಲುವುದು. ಪತ್ರಕರ್ತರು ಸ್ವತಂತ್ರರೂ ಹೌದು, ಸಮಾಜಕ್ಕೆ ಉತ್ತರದಾಯಿಗಳೂ ಹೌದು. ಪತ್ರಿಕೆಗಳ ಸ್ವಾತಂತ್ರ್ಯ ಹರಣವಾದರೆ ಪ್ರಜೆಗಳ ಸ್ವಾತಂತ್ರ್ಯ ಮತ್ತು ಹಕ್ಕುಗಳ ಹರಣವಾದಂತೆಯೇ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸ್ವಾತಂತ್ರ್ಯವೇ ಪರಮ ಮೌಲ್ಯವಾಗಿರುವಾಗ ರಾಷ್ಟ್ರಹಿತ ಎಂಬ ಅಮೂರ್ತ ಕಲ್ಪನೆಯಿಂದ ಪ್ರಜೆಗಳಿಗೆ ಸ್ವಾತಂತ್ರ್ಯವನ್ನು ನಿರಾಕರಿಸುವುದು ಸರಿಯೇ? ಭೌಗೋಳಿಕ ಪ್ರದೇಶದ ವ್ಯಾಪ್ತಿಯೊಂದೇ ರಾಷ್ಟ್ರದ ಮಾನದಂಡವಾಗದು, ಅಲ್ಲಿನ ಜನವಾಸಿಗಳದೇ ಪಾರಮ್ಯ. ಜನರಿಲ್ಲದ ರಾಷ್ಟ್ರ ಶೂನ್ಯವಲ್ಲದೆ ಮತ್ತೇನು? ಜನಾಭಿಪ್ರಾಯಕ್ಕೆ ಮನ್ನಣೆ ಕೊಡದ ರಾಷ್ಟ್ರದ ಪರಿಕಲ್ಪನೆ ಒಂದು ಭ್ರಾಮಕ ಕಲ್ಪನೆಯಷ್ಟೇ.
 
ನರೇಂದ್ರ ಮೋದಿಯವರ ಸರಕಾರ ಬಂದನಂತರ ಸಂಸದೀಯ ಪ್ರಜಾಸತ್ತೆಯ ಸಾಂವಿಧಾನಕ ಸಂಸ್ಥೆಗಳು ಒಂದೊಂದೇ ದುರ್ಬಲಗೊಳ್ಳುತ್ತಿವೆ. ಚುನಾವಣಾ ಆಯೋಗದ ನಂತರ ಈಗ ಪತ್ರಿಕಾ ಮಂಡಳಿಯ ಸರದಿ ಬಂದಂತಿದೆ. ಪತ್ರಿಕಾ ಮಂಡಳಿ ಅರೆ ನ್ಯಾಯಾಂಗ ವ್ಯವಸ್ಥೆ. ಅದಕ್ಕೆ ಶಿಕ್ಷಿಸುವ ಅಧಿಕಾರ ಇಲ್ಲವಾದ್ದರಿಂದ ಅದೊಂದು ಹಲ್ಲಿಲ್ಲದ ಹಾವು ಎಂಬ ಟೀಕೆ ಇಷ್ಟು ದಿನ ಕೇಳಿ ಬರುತ್ತಿತ್ತು. ಈಗ ಈ ಹಲ್ಲಿಲ್ಲದ ಹಾವು ಭುಸುಗುಡುವುದನ್ನೂ ನಿಲ್ಲಿಸಿ ಸರಕಾರಕ್ಕೆ ಬಹುಪರಾಕ್ ಹೇಳುವ ಭಟ್ಟಂಗಿ ಸಂಸ್ಥೆಯಾಗಿರುವಂತಿದೆ. ಬಿಜೆಪಿಗೆ, ಅದರ ಮಾತೃ ಸಂಸ್ಥೆಗೆ ಹಾಗೂ ಮೋದಿಯವರ ಸರಕಾರಕ್ಕೆ ಪತ್ರಿಕೆಗಳು ಹಾಗೂ ಪತ್ರಿಕಾ ಸ್ವಾತಂತ್ರ್ಯ ಎಂದರೆ ಒಂದು ಬಗೆಯ ಅಸಹಿಷ್ಣುತೆ ಎಂಬುದು ಜಗಜ್ಜಾಹೀರಾಗಿರುವ ಸತ್ಯ ಸಂಗತಿ. ಮೋದಿಯವರ ಸರಕಾರ ಬಂದನಂತರ ಮಾಧ್ಯಮಗಳಲ್ಲಿ ಹೊಗಳುಭಟ್ಟಂಗಿತನದ ಅಪಾಯಕಾರಿ ಪ್ರವೃತ್ತಿ ಕಂಡುಬರುತ್ತಿರುವ ಕಾಲವಿದು. ಸಾಮದಾನಭೇದ ಇದಾವುದಕ್ಕೂ ಬಗ್ಗದಿದ್ದರೆ ದಂಡವನ್ನು ಬಳಸಿಯಾದರೂ ವಿಭಿನ್ನ ದನಿಗಳನ್ನು ತಮ್ಮ ದಾರಿಗೆ ತರುತ್ತೇವೆ, ದನಿಯನ್ನು ಹತ್ತಿಕ್ಕುವುದೇ ಒಂದು ಶಿಕ್ಷೆ (ಸೈಲೆನ್ಸ್ ಇಸ್‌ದ ಪನಿಶ್ಮೆಂಟ್-ಪ್ರಕಾಶ್ ಜಾವಡೇಕರ್) ಎನ್ನುತ್ತಿರುವ ಅಧಿಕಾರಾರೂಢ ಪಕ್ಷದ ನೇತಾರರ ಈ ಅಂಬೋಣಗಳು ಸರಕಾರದ ದಮನ ಪ್ರವೃತ್ತಿಯ ವಾಗ್ರೂಪಗಳೇ ಆಗಿವೆ. ಇಂದು, ಪತ್ರಿಕಾ ವೃತ್ತಿಧರ್ಮದ ಶೀಲ, ಗುಣಮಟ್ಟಗಳು ಕುಸಿಯುತ್ತಿರುವ ಆತಂಕಕಾರಿ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸಂಕುಚಿತ ಅರ್ಥದ ರಾಷ್ಟ್ರಪರಿಕಲ್ಪನೆಯನ್ನು ಬೆಂಬಲಿಸುವಂತೆ ಸರಕಾರ ಒತ್ತಡ ಹೇರುತ್ತಿರುವ ದಿನಗಳು. ಸತ್ಯವನ್ನು ವರದಿ ಮಾಡಬೇಕಾದ ಪತ್ರಿಕೆಗಳು ಇಂತಹ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಅದಕ್ಕೆ ನೈತಿಕಶಕ್ತಿಯಾಗಿ ನಿಲ್ಲಬೇಕಾದ ಪತ್ರಿಕಾ ಮಂಡಳಿ ಸರಕಾರದ ಪತ್ರಿಕಾ ಸ್ವಾತಂತ್ರ್ಯ ದಮನ ನೀತಿಯನ್ನು ಬೆಂಬಲಿಸಲು ಸುಪ್ರೀಂ ಕೋರ್ಟಿನ ಮಾರ್ಗ ಹಿಡಿದಿರುವುದು ಅಕ್ರಮವನ್ನು ಸಕ್ರಮಗೊಳಿಸುವ ಆತಂಕಕಾರಿ ನಡೆ. ಮಂಡಳಿಯ ಸದಸ್ಯರು ಹಾಗೂ ದೇಶದಾದ್ಯಂತ ಪತ್ರಿಕಾ ಮಾಧ್ಯಮ ವ್ಯಕ್ತಪಡಿಸಿರುವ ವಿರೋಧವನ್ನು ಗಮನಕ್ಕೆ ತೆಗೆದುಕೊಂಡು ಅಧ್ಯಕ್ಷರು ಇಂದಿನ ಸರಕಾರದ ದಾಸನಂತೆ ವರ್ತಿಸುವ ತಮ್ಮ ನಿಲುವನ್ನು ಬದಲಾಯಿಸಿಕೊಂಡು ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಕಟಿಬದ್ಧವಾಗಬೇಕು.

ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ದೇಶದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಹೀಗೆ ಹೇಳಿದ್ದಾರೆ:
‘‘ಹತ್ತಿಕ್ಕಿದ ಅಥವಾ ನಿಯಂತ್ರಿತ ಪತ್ರಿಕೆಗಳಿಗಿಂತ, ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗದ ಅಪಾಯಗಳಿದ್ದಾಗ್ಯೂ ಸಂಪೂರ್ಣ ಸ್ವಾತಂತ್ರ್ಯದ ಪತ್ರಿಕೆಗಳೇ ಇರಲಿ ಎಂಬುದು ನನ್ನ ಆಶಯ’’

ನೆಹರೂ ಅವರ ಆಶಯವನ್ನು ಅರ್ಥಮಾಡಿಕೊಂಡು ಪತ್ರಿಕೆಗಳು ಸ್ವಾತಂತ್ರ್ಯವನ್ನು ದುರುಪಯೋಗಮಾಡಿಕೊಳ್ಳದೇ ತಮ್ಮ ಕರ್ತವ್ಯ ಹೊಣೆಗಾರಿಕೆಗಳನ್ನು ನಿರ್ವಹಿಸಬೇಕು ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ತುಡಿತವನ್ನು ಸರಕಾರ ಅಂಕೆಯಲ್ಲಿಟ್ಟುಕೊಳ್ಳಬೇಕು. ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು ಕಾಪಾಡುವ-ಪಾಲಿಸುವ ದೃಷ್ಟಿಯಿಂದ ಇವೆರಡೂ ಇಂದಿನ ಅತ್ಯಗತ್ಯವಾಗಿದೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News