×
Ad

ಗೂರ್ಖಾ ಸಮುದಾಯದ 1 ಲಕ್ಷ ಜನರ ಎನ್‌ಆರ್‌ಸಿಯಿಂದ ಹೊರಕ್ಕೆ: ಮಮತಾ

Update: 2019-09-01 19:24 IST

ಕೋಲ್ಕತಾ,ಸೆ.1: ಅಸ್ಸಾಂ ಎನ್‌ಆರ್‌ಸಿ ಪ್ರಕ್ರಿಯೆ ಒಂದು ಅಧ್ವಾನ ಎಂದು ರವಿವಾರ ಇಲ್ಲಿ ಬಣ್ಣಿಸಿದ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಗೂರ್ಖಾ ಸಮುದಾಯದ ಒಂದು ಲಕ್ಷ ಜನರನ್ನು ಎನ್‌ಆರ್‌ಸಿಯಿಂದ ಹೊರಗಿರಿಸಿರುವುದು ತನಗೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿದರು. ನಿಜವಾದ ಭಾರತೀಯರು ಎನ್‌ಆರ್‌ಸಿಯಿಂದ ಹೊರಗಿರದಂತೆ ನೋಡಿಕೊಳ್ಳುವಂತೆ ಕೇಂದ್ರವನ್ನು ಅವರು ಆಗ್ರಹಿಸಿದರು.

ಪೂರ್ಣ ಎನ್‌ಆರ್‌ಸಿ ಅಧ್ವಾನದ ಬಗ್ಗೆ ತನಗೆ ತಿಳಿದಿಲ್ಲ ಎಂದ ಅವರು,ಸಿಆರ್‌ಪಿಎಫ್ ಮತ್ತು ಇತರ ಯೋಧರು,ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಕುಟುಂಬ ಸದಸ್ಯರು ಸೇರಿದಂತೆ ಲಕ್ಷಾಂತರ ನಿಜವಾದ ಭಾರತೀಯರ ಹೆಸರುಗಳು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ. ನಿಜವಾದ ಭಾರತೀಯರಿಗೆ ನ್ಯಾಯ ದೊರಕುವಂತೆ ಸರಕಾರವು ಕಾಳಜಿ ವಹಿಸಬೇಕು ಎಂದರು.

  ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಮತ್ತು ಅಸ್ಸಾಂ ಸಚಿವ ಹಿಮಂತ ಬಿಸ್ವ ಶರ್ಮಾ ಸೇರಿದಂತೆ ಹಲವಾರು ನಾಯಕರು ವಿವಿಧ ಕಾರಣಗಳಿಗಾಗಿ ಎನ್‌ಆರ್‌ಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಟೀಕಿಸಿರುವ ಒವೈಸಿ, “ಅಸ್ಸಾಮಿನಲ್ಲಿ 50 ಲಕ್ಷಕ್ಕೂ ಅಧಿಕ ಅಕ್ರಮ ವಲಸಿಗರು ಇದ್ದಾರೆಂದು ನೀವು ಹಿಂದೆ ಹೇಳಿದ್ದೀರಿ. ನೀವು ಸುಳ್ಳು ಹೇಳಿದ್ದೀರೋ ಅಥವಾ ಎನ್‌ಆರ್‌ಸಿ ಸುಳ್ಳು ಹೇಳುತ್ತಿದೆಯೇ” ಎಂದು ಪ್ರಶ್ನಿಸಿದ್ದಾರೆ. 1971ಕ್ಕೆ ಮೊದಲು ಬಾಂಗ್ಲಾದೇಶದಿಂದ ನಿರಾಶ್ರಿತರಾಗಿ ವಲಸೆ ಬಂದಿದ್ದ ಸಾವಿರಾರು ಹಿಂದುಗಳ ಹೆಸರುಗಳನ್ನು ಪಟ್ಟಿಯಿಂದ ಹೊರಗಿರಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.

ತನ್ಮಧ್ಯೆ,ರಾಜ್ಯದಲ್ಲಿಯೂ ಎನ್‌ಆರ್‌ಸಿಯನ್ನು ಜಾರಿಗೊಳಿಸಬೇಕು ಎಂದು ಪ.ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಆಗ್ರಹಿಸಿದ್ದಾರೆ. ‘ತೃಣಮೂಲ ಸರಕಾರವು ಇದಕ್ಕೆ ಒಪ್ಪಿಕೊಳ್ಳದಿದ್ದರೆ 2021ರಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ ಅದನ್ನು ಜಾರಿಗೊಳಿಸುತ್ತೇವೆ ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ರಾಜ್ಯದಿಂದ ಹೊರಕ್ಕಟ್ಟುತ್ತೇವೆ ’ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News