ಕೇರಳದ ಕಾಲೇಜು ಕ್ಯಾಂಪಸ್ ನಲ್ಲಿ ಪಾಕ್ ಧ್ವಜವನ್ನು ಹಾರಿಸಿದರೇ ವಿದ್ಯಾರ್ಥಿಗಳು?

Update: 2019-09-02 11:12 GMT

ದೇಶದ ಪ್ರಮುಖ ಮಾಧ್ಯಮಗಳು ಆಗಸ್ಟ್ 31ರಂದು 'ಸ್ಫೋಟಕ' ಸುದ್ದಿಯೊಂದನ್ನು ಪ್ರಸಾರ ಮಾಡಿತ್ತು. ಕೋಝಿಕ್ಕೋಡ್‍ ನ ಸಿಲ್ವರ್ ಆರ್ಟ್ಸ್ ಕಾಲೇಜಿನಲ್ಲಿ ಕಾಲೇಜು ಚುನಾವಣಾ ಪ್ರಚಾರದ ವೇಳೆ ಪಾಕ್ ಧ್ವಜ ಹಾರಿಸಲಾಗಿದ್ದು, ಈ ಸಂಬಂಧ ಕೇರಳ ಪೊಲೀಸರು 30 ವಿದ್ಯಾರ್ಥಿಗಳ (ಟೈಮ್ಸ್ ನೌ ವರದಿ ಪ್ರಕಾರ 25) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎನ್ನುವುದು ಸಾರಾಂಶ.

ಬಿಜೆಪಿ ಈ ಘಟನೆ ವಿರುದ್ಧ ಪ್ರತಿಭಟನೆ ನಡೆಸಿದೆ ಎಂದು ಹೇಳಿದ ಟೈಮ್ಸ್ ನೌ ನಿರೂಪಕಿ, ಚಾನಲ್‍ನ ಬಾತ್ಮೀದಾರರನ್ನು ಪ್ರಶ್ನಿಸಿ, "ಯಸ್ ವಿವೇಕ್, ನಿಜವಾಗಿ ನಡೆದದ್ದೇನು ಎಂಬ ಬಗ್ಗೆ ವಿವರ ನೀಡುತ್ತೀರಾ?, ಏಕೆಂದರೆ ದೊಡ್ಡ ಪಾಕಿಸ್ತಾನಿ ಧ್ವಜವನ್ನು ಹಾರಿಸುತ್ತಿರುವ ದೃಶ್ಯಾವಳಿ ನಮ್ಮ ಮುಂದಿದೆ" ಎಂದು ಕೇಳುತ್ತಾರೆ. ನಿರೂಪಕಿಯ ಪ್ರತಿಪಾದನೆಯನ್ನು ಬಾತ್ಮೀದಾರ ಪುನರುಚ್ಚರಿಸುತ್ತಾರೆ.

ಎಎನ್‍ಐ, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್, ಇಂಡಿಯಾ ಟುಡೇ, ಮೈ ನೇಷನ್, ಒಪಿ ಇಂಡಿಯಾ ಮತ್ತು ದೈನಿಕ್ ಜಾಗರಣ್ ಇಂಥದ್ದೇ ವರದಿಗಳನ್ನು ಪ್ರಕಟಿಸಿ, ಕಾಲೇಜು ಕ್ಯಾಂಪಸ್‍ನಲ್ಲಿ ಮುಸ್ಲಿಂ ಸ್ಟೂಡೆಂಟ್ ಫ್ರಂಟ್ (ಎಂಎಸ್‍ಎಫ್) ಪಾಕಿಸ್ತಾನಿ ಧ್ವಜ ಹಾರಿಸಿವೆ ಎಂದು ಪ್ರತಿಪಾದಿಸಿದವು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪಾಕಿಸ್ತಾನಿ ಧ್ವಜ ಹಾರಿಸಲಾಗಿದೆ ಎಂಬ ‘ಆರೋಪ ಕೇಳಿಬಂದಿದೆ’ ಎಂಬ ಉಲ್ಲೇಖ ಯಾವ ಮಾಧ್ಯಮಗಳಲ್ಲೂ ಇರಲಿಲ್ಲ. ಕೆಲ ಮಾಧ್ಯಮಗಳು ಲೇಖನದಲ್ಲಿ ಈ ಶಬ್ದ ಬಳಸಿದ್ದವು.

ಹೀಗೆ ನಡೆದಿದೆ ಎನ್ನಲಾದ ಘಟನೆಯನ್ನು ಪಾಕಿಸ್ತಾನಿ ಮಾಧ್ಯಮ ಕೂಡಾ ವರದಿ ಮಾಡಿದೆ. ಟೈಮ್ಸ್ ನೌ ಪ್ರಸಾರ ಮಾಡಿದ ಈ ಕುರಿತ ಸುದ್ದಿಯನ್ನು ಮೇಜರ್ ಜನರಲ್ ಆಸಿಫ್ ಗಫೂರ್ ಸೇರಿದಂತೆ ಹಲವು ಮಂದಿ ಪಾಕಿಸ್ತಾನಿಯರು ಷೇರ್ ಮಾಡಿದ್ದಾರೆ.

ಕ್ಯಾಂಪಸ್‍ ನಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರವಾಗುವ ಮುನ್ನ ಈ ಬಗ್ಗೆ ಟ್ವೀಟ್ ಮಾಡಿದವರಲ್ಲಿ ಎಬಿಪಿ ನ್ಯೂಸ್ ಪತ್ರಕರ್ತ ಪಿಂಕಿ ರಾಜಪುರೋಹಿತ್ ಕೂಡಾ ಒಬ್ಬರು.

“ಕಾಲೇಜು ಕ್ಯಾಂಪಸ್ ‍ನಲ್ಲಿ ಪಾಕಿಸ್ತಾನಿ ಧ್ವಜ ಬೀಸಿದ ಆರೋಪದಲ್ಲಿ 30 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು. ಪೆರಂಬ್ರಾ ಸಿಲ್ವರ್ ಕಾಲೇಜು ಕ್ಯಾಂಪಸ್‍ನಲ್ಲಿ ಪಾಕಿಸ್ತಾನಿ ಧ್ವಜವನ್ನು ಬೀಸಿದ ಆರೋಪದಲ್ಲಿ ಕೋಝಿಕ್ಕೋಡ್‍ನ ಪೆರಂಬ್ರಾ ಪೊಲೀಸರು ಮುಸ್ಲಿಂ ಸ್ಟೂಡೆಂಟ್ಸ್ ಫ್ರಂಟ್ (ಎಂಎಸ್‍ಎಫ್)ಗೆ ಸೇರಿದ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ" ಎಂದು  ಪಿಂಕಿ ರಾಜಪುರೋಹಿತ್ ಟ್ವೀಟ್ ಮಾಡಿದ್ದರು.

ವಿದ್ಯಾರ್ಥಿಗಳು ಹಾರಿಸಿದ್ದು ಪಾಕಿಸ್ತಾನಿ ಧ್ವಜ ಅಲ್ಲ, ಎಂಎಸ್‍ಎಫ್ ಧ್ವಜ

ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಜತೆ ಗುರುತಿಸಿಕೊಂಡಿರುವ ವಿದ್ಯಾರ್ಥಿ ಸಂಘಟನೆ ಎಂಎಸ್‍ಎಫ್‍ ಗೆ ಸೇರಿದ 30 ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಭಾರತೀಯ ದಂಡಸಂಹಿತೆಯ ಸೆಕ್ಷನ್ 143 (ಕಾನೂನುಬಾಹಿರ ಗುಂಪು ಸೇರುವಿಕೆ), 147 (ದೊಂಬಿ), 153 (ದೊಂಬಿಯ ಉದ್ದೇಶ) ಮತ್ತು 149 (ಕಾನೂನುಬಾಹಿರ ಗುಂಪು ಸೇರಿದಾಗ ಎಸಗಿದ ಅಪರಾಧ) ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ. ಆದರೆ ವಿದ್ಯಾರ್ಥಿಗಳು ಬೀಸಿದ್ದು ಪಾಕಿಸ್ತಾನದ ಧ್ವಜವನ್ನೇ ಅಥವಾ ಎಂಎಸ್‍ಎಫ್ ಧ್ವಜವನ್ನೇ ಎಂಬ ಸತ್ಯಾಂಶವನ್ನು ಪರಿಶೀಲಿಸದೇ ಮಾಧ್ಯಮಗಳು ಪೊಲೀಸ್ ಕ್ರಮದ ಬಗ್ಗೆ ವರದಿ ಪ್ರಕಟಿಸಿದವು.

ಮಲೆಯಾಳಂ ಸುದ್ದಿಜಾಲತಾಣ  azhimukham.com ಎಂಎಸ್‍ಎಫ್ ರಾಜ್ಯ ಕಾರ್ಯದರ್ಶಿ ನಿಶದ್ ಕೆ.ಸಲೀಂ ಅವರ ಹೇಳಿಕೆಯನ್ನು ಉಲ್ಲೇಖಿಸಿತ್ತು: “ಸೆಪ್ಟೆಂಬರ್ 5ರಂದು ನಡೆಯಲಿರುವ ಚುನಾವಣೆಯ ಪ್ರಚಾರಕ್ಕೆ ವಿದ್ಯಾರ್ಥಿಗಳಿಗೆ ಸೀಮಿತ ಬಜೆಟ್ ಇತ್ತು. ಹಸಿರು ಮತ್ತು ಬಿಳಿಯ ಅನುಪಾತ ಗೊತ್ತಿಲ್ಲದ ಟೈಲರ್ ಒಬ್ಬರ ಬಳಿ ವಿದ್ಯಾರ್ಥಿಗಳು ಧ್ವಜ ಹೊಲಿಸಿದರು. ಎಂಎಸ್‍ಎಫ್ ಮೊದಲು ದೊಡ್ಡ ಧ್ವಜವನ್ನು ಒಂದು ಕಂಬದಲ್ಲಿ ಹಾರಿಸಿತು. ಆದರೆ ಅದು ಮುರಿಯಿತು" ಎಂದವರು ಹೇಳಿದ್ದರು.

ಈ ಘಟನೆಯ ಮತ್ತೊಂದು ವಿಡಿಯೊದಲ್ಲಿ ಕಂಡುಬರುವಂತೆ, ಧ್ವಜವನ್ನು ಹೊಂದಿರುವ ಕಂಬ ಸುಸ್ಥಿತಿಯಲ್ಲಿತ್ತು. ಈ ವಿಡಿಯೊವನ್ನು ಅಬ್ದುಲ್ ಜಲೀಲ್ ಎಂಬ ಫೇಸ್‍ಬುಕ್ ಬಳಕೆದಾರರು ಅಪ್‍ಲೋಡ್ ಮಾಡಿದ್ದು, "ಈ ವಿಡಿಯೊ ಸತ್ಯವನ್ನು ತೋರಿಸುತ್ತದೆ" ಎಂದು ಬರೆದಿದ್ದರು.

ಟ್ವಿಟರ್‍ನಲ್ಲಿ ಈ ಘಟನೆಯ ಬಗ್ಗೆ ಅಪ್ ಲೋಡ್ ಆದ ಮತ್ತೊಂದು ವಿಡಿಯೊವನ್ನು ಆಲ್ಟ್‍ ನ್ಯೂಸ್ ಪತ್ತೆ ಮಾಡಿದೆ. ಈ ಎರಡೂ ವಿಡಿಯೊಗಳಿಂದ ತಿಳಿದುಬರುವಂತೆ, ಸಿಲ್ವರ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹಾರಿಸಿದ ಧ್ವಜ ಪಾಕಿಸ್ತಾನಿ ಧ್ವಜ ಅಲ್ಲ. ಪಾಕಿಸ್ತಾನಿ ಧ್ವಜ ಮತ್ತು ಎಂಎಸ್‍ಎಫ್ ಧ್ವಜದ ನಡುವಿನ ವ್ಯತ್ಯಾಸ ವಿಶಿಷ್ಟವಾಗಿದೆ.

1. ಪಾಕಿಸ್ತಾನಿ ಧ್ವಜದಲ್ಲಿ ಬಿಳಿಯ ಬಣ್ಣ ಎಡಭಾಗದಲ್ಲಿದ್ದರೆ, ಎಂಎಸ್‍ಎಫ್ ಧ್ವಜದಲ್ಲಿ ಈ ಬಣ್ಣ ಕೆಳಭಾಗದಲ್ಲಿದೆ.

2. ಪಾಕಿಸ್ತಾನದ ಧ್ವಜದಲ್ಲಿ ಅರ್ಧಚಂದ್ರ ಮಧ್ಯಭಾಗದಲ್ಲಿದ್ದರೆ, ಎಂಎಸ್‍ಎಫ್ ಧ್ವಜದಲ್ಲಿ ಅದು ಮೇಲ್ತುದಿಯ ಎಡ ಮೂಲೆಯಲ್ಲಿದೆ.

ಪಾಕಿಸ್ತಾನಿ ಧ್ವಜ ಹಾಗೂ ಎಂಎಸ್‍ಎಫ್ ಧ್ವಜವನ್ನು ಜತೆಜತೆಗೆ ನೋಡಿದಾಗ ಈ ಭಿನ್ನತೆ ಸ್ಪಷ್ಟವಾಗಿ ತಿಳಿಯುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ  ವಿಡಿಯೊದಲ್ಲಿ ವಿದ್ಯಾರ್ಥಿಗಳು ಎಲ್ಲ ನಾಲ್ಕೂ ಮೂಲೆಗಳಿಂದ ಧ್ವಜವನ್ನು ಅಡ್ಡಾಕೃತಿಯಲ್ಲಿ ಹಿಡಿದಿರುವುದು ಕಂಡುಬರುತ್ತದೆ ಹಾಗೂ ಧ್ವಜಕ್ಕೆ ಕಂಬ ಇರುವುದಿಲ್ಲ. ಧ್ವಜವನ್ನು ನಾವು ತಲೆಕೆಳಗೆ ಮಾಡಿದಾಗ, ಕಾಲೇಜಿನಲ್ಲಿ ಬೀಸಿದ ಧ್ವಜದಂತೆಯೇ ಕಾಣುತ್ತದೆ. ಅಂದರೆ ಕೆಳಭಾಗದಲ್ಲಿ ಬಿಳಿ ಹಾಗೂ ಅರ್ಧಚಂದ್ರ ಮೇಲ್ತುದಿಯ ಎಡ ಮೂಲೆಯಲ್ಲಿ ಕಾಣಿಸುತ್ತದೆ.

ಈ ವಿವಾದ ಸೃಷ್ಟಿಯಾಗಲು ಕಾರಣವೆಂದರೆ, ಕಾಲೇಜು ಕ್ಯಾಂಪಸ್‍ನಲ್ಲಿ ಹಾರಿಸಿದ ಎಂಎಸ್‍ಎಫ್ ಧ್ವಜದ ಬಣ್ಣಗಳ ಅನುಪಾತ ಸರಿಯಾದ ಪ್ರಮಾಣದಲ್ಲಿ ಇಲ್ಲದಿರುವುದು.

www.altnews.in ಜತೆಗೆ ಮಾತನಾಡಿದ ಎಂಎಸ್‍ಎಫ್ ಪ್ರಧಾನ ಕಾರ್ಯದರ್ಶಿ ನವಾಝ್ ಹೇಳುವಂತೆ, "ಈ ಸುದ್ದಿ ಸರಿಯಲ್ಲ. ಇದು ಎಡಭಾಗದಲ್ಲಿ ಬಿಳಿ ಬಣ್ಣ ಹೊಂದಿದ ಪಾಕಿಸ್ತಾನಿ ಧ್ವಜ ಅಲ್ಲ. ಎಂಎಸ್‍ಎಫ್ ಧ್ವಜದಲ್ಲಿ ಬಿಳಿ ಬಣ್ಣ ಕೆಳಭಾಗದಲ್ಲಿದೆ. ಈ ಚಿತ್ರವನ್ನು ನೀವು ಸರಿಯಾಗಿ ಹಿಡಿದಾಗ, ಬಿಳಿ ಬಣ್ಣ ತಳಭಾಗದಲ್ಲಿ ಇರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಎಂಎಸ್‍ಎಫ್ ಧ್ವಜದಲ್ಲಿ ಅರ್ಧಚಂದ್ರ ಇರುವುದು ಎಡಮೂಲೆಯಲ್ಲಿ. ಸಮಸ್ಯೆ ಉದ್ಭವಿಸಿದ್ದು ಎಲ್ಲಿ ಎಂದರೆ ದೊಡ್ಡ ಗಾತ್ರದ ಧ್ವಜವನ್ನು ನಾವೇ  ತಯಾರಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಧ್ವಜದಲ್ಲಿ ಹಸಿರು ಹಾಗೂ ಬಿಳಿ ಬಣ್ಣ 1:1 ಅನುಪಾತದಲ್ಲಿ ಇರಬೇಕು ಎಂಬ ಅಂಶ ಇದನ್ನು ಸಿದ್ಧಪಡಿಸಿದ ಟೈಲರ್‍ಗೆ ಗೊತ್ತಿರಲಿಲ್ಲ. ಆತ 3:1 ಅನುಪಾತದ ಧ್ವಜ ಸಿದ್ಧಪಡಿಸಿದ"

ಇಷ್ಟು ಮಾತ್ರವಲ್ಲದೇ, ವಿದ್ಯಾರ್ಥಿಗಳು ಇಂಥ ಪರಿಪೂರ್ಣವಲ್ಲದ ಧ್ವಜವನ್ನು ವಿದ್ಯಾರ್ಥಿಗಳು ಹಾರಿಸಿದ್ದು ಇದೇ ಮೊದಲಲ್ಲ. ಪೆರಂಬ್ರಾ ಸಿಲ್ವರ್ ಆರ್ಟ್ಸ್ ಕಾಲೇಜಿನಲ್ಲಿ 2016ರಲ್ಲಿ ಹಾರಿಸಿದ ಧ್ವಜದ ಚಿತ್ರವನ್ನು ನೋಡಿದರೆ ಕೂಡಾ, ಅದು ಸಮರ್ಪಕವಲ್ಲದ ಬಣ್ಣದ ಅನುಪಾತದಿಂದ ಕೂಡಿದೆ ಎನ್ನುವುದು ತಿಳಿದುಬರುತ್ತದೆ.

ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಕಾಲೇಜು ಕ್ಯಾಂಪಸ್‍ನಲ್ಲಿ ಹಾರಿಸಿದ ಧ್ವಜ ಪಾಕಿಸ್ತಾನಿ ಧ್ವಜ ಅಲ್ಲ; ಅದು ಮುಸ್ಲಿಂ ಸ್ಟೂಡೆಂಟ್ ಫ್ರಂಟ್ (ಎಮೆಸ್‍ಎಫ್) ಧ್ವಜ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಸತ್ಯಾಂಶವನ್ನು ತಮ್ಮ ವರದಿಗಳಲ್ಲಿ ಬೆಳಕಿಗೆ ಬರುವಲ್ಲಿ ಮಾಧ್ಯಮ ಸಂಸ್ಥೆಗಳು ವಿಫಲವಾಗಿದ್ದು, ಸುಳ್ಳು ಪ್ರತಿಪಾದನೆಯನ್ನೇ ನಂಬಿವೆ. ಮುಸ್ಲಿಂ ಸಂಘಟನೆಯ ಧ್ವಜವನ್ನು ಪಾಕಿಸ್ತಾನಿ ಧ್ವಜ ಎಂದು ಅಪಾರ್ಥ ಮಾಡಿಕೊಂಡಿರುವ ಘಟನೆ ಇದೇ ಮೊದಲಲ್ಲ.

ಕೃಪೆ: altnews.in

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News