ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ಬಿಜೆಪಿ ನಾಯಕ ಚಿನ್ಮಯಾನಂದ ಇನ್ನೂ ನಾಪತ್ತೆ

Update: 2019-09-03 17:56 GMT

ಶಹಜಾನ್‌ಪುರ(ಉ.ಪ್ರ),ಸೆ.3: ಕಾನೂನು ವಿದ್ಯಾರ್ಥಿನಿಯೋರ್ವಳು ಹೊರಿಸಿರುವ ಕಿರುಕುಳ ಆರೋಪಗಳ ಕುರಿತು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಚಿನ್ಮಯಾನಂದರನ್ನು ಪ್ರಶ್ನಿಸಲು ಹರಿದ್ವಾರದಲ್ಲಿಯ ಅವರ ಆಶ್ರಮಕ್ಕೆ ತೆರಳಿದ್ದ ಸ್ಥಳೀಯ ಪೊಲೀಸರ ತಂಡವು ಬರಿಗೈಯಲ್ಲಿ ವಾಪಸಾಗಿದೆ.

ಚಿನ್ಮಯಾನಂದ ತನ್ನ ಆಶ್ರಮದಲ್ಲಿ ಇರಲಿಲ್ಲವಾದ್ದರಿಂದ ಪೊಲೀಸ್ ತಂಡವು ಸೋಮವಾರ ವಾಪಸಾಗಿದೆ ಎಂದು ಎಸ್‌ಪಿ ದಿನೇಶ ತ್ರಿಪಾಠಿ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವಿದ್ಯಾರ್ಥಿನಿಯ ಕುಟುಂಬ ಸದಸ್ಯರು ದಿಲ್ಲಿಯಲ್ಲಿದ್ದು,ಅವರ ಇಲ್ಲಿಯ ನಿವಾಸಕ್ಕೆ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದರು.

ಪುತ್ರಿಯನ್ನು ಭೇಟಿಯಾಗಲು ನಾವು ದಿಲ್ಲಿ ತಲುಪಿದಾಗ ಆಕೆ ತುಂಬ ಹೆದರಿಕೊಂಡಿದ್ದಳು ಮತ್ತು ತಾಯಿಯನ್ನು ಕಂಡ ತಕ್ಷಣ ಅಳತೊಡಗಿದ್ದಳು. ಆಡಳಿತ ಮತ್ತು ಕಾನೂನು ನಮ್ಮ ಪರವಾಗಿದೆ ಎಂದು ಆಕೆಗೆ ಧೈರ್ಯ ತುಂಬಿದ್ದೇವೆ. ಆಕೆ ಮನೆಗೆ ಮರಳಲು ಬಯಸಿದ್ದಳು,ಆದರೆ ಹೆದರಿಕೆಯಿಂದ ರಾಜಸ್ಥಾನಕ್ಕೆ ತೆರಳಿದ್ದಳು. ಚಿನ್ಮಯಾನಂದ ವಿರುದ್ಧ ಎಲ್ಲ ಪುರಾವೆಗಳು ಆಕೆಯ ಬಳಿಯಿದ್ದು, ಸುರಕ್ಷಿತ ಸ್ಥಳದಲ್ಲಿರಿಸಿದ್ದಾಳೆ ಎಂದು ವಿದ್ಯಾರ್ಥಿನಿಯ ತಂದೆ ದೂರವಾಣಿಯಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 ಚಿನ್ಮಯಾನಂದರ ಟ್ರಸ್ಟ್ ನಡೆಸುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈ ಯುವತಿ ಆ.24ರಿಂದ ನಾಪತ್ತೆಯಾಗಿದ್ದಳು. ಅದಕ್ಕೂ ಒಂದು ದಿನ ಮೊದಲು ಆಕೆ ‘ಸಂತ ಸಮುದಾಯದ ಹಿರಿಯ ನಾಯಕ ’ನಿಂದ ತನಗೆ ಕಿರುಕುಳ ಮತ್ತು ಜೀವ ಬೆದರಿಕೆಯನ್ನು ಆರೋಪಿಸಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಳು. ಆಕೆ ವೀಡಿಯೊದಲ್ಲಿ ಚಿನ್ಮಯಾನಂದರನ್ನು ಹೆಸರಿಸಿರಲಿಲ್ಲ.

ಚಿನ್ಮಯಾನಂದ ತನ್ನ ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ತಂದೆ ಪೊಲೀಸ್ ದೂರು ಸಲ್ಲಿಸಿದ್ದಾರೆ. ಆದರೆ ಆರೋಪವನ್ನು ತಿರಸ್ಕರಿಸಿರುವ ಚಿನ್ಮಯಾನಂದರ ವಕೀಲರು,ಇದು ಅವರನ್ನು ಬ್ಲಾಕ್‌ಮೇಲ್ ಮಾಡುವ ಸಂಚು ಎಂದು ಹೇಳಿದ್ದಾರೆ.

ಉ.ಪ್ರದೇಶ ಪೊಲೀಸರು ಆ.30ರಂದು ರಾಜಸ್ಥಾನದಲ್ಲಿ ಯುವತಿಯನ್ನು ಪತ್ತೆ ಹಚ್ಚಿದ್ದರು.

ಕೊಲೆಗಾಗಿ ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಲ್ಲಿ ಚಿನ್ಮಯಾನಂದ ವಿರುದ್ಧ ಶಹಜಾನ್‌ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿನಿ ಆರೋಪಗಳ ಕುರಿತು ತನಿಖೆಗೆ ಐಜಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಸೋಮವಾರ ಉ.ಪ್ರ.ಸರಕಾರಕ್ಕೆ ನಿರ್ದೇಶ ನೀಡಿರುವ ಸರ್ವೋಚ್ಚ ನ್ಯಾಯಾಲಯವು,ಅಲಹಾಬಾದ್ ಹೈಕೋರ್ಟ್ ಪೀಠವು ತನಿಖೆಯ ಮೇಲೆ ನಿಗಾ ಇರಿಸುತ್ತದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News