ಬುಡಕಟ್ಟು ಯುವತಿಗೆ ಹಲ್ಲೆ: ಮಧ್ಯಪ್ರದೇಶ ಪೊಲೀಸರಿಂದ ವರದಿ ಕೇಳಿದ ಎನ್‌ಸಿಡಬ್ಲು

Update: 2019-09-04 13:40 GMT

  ಹೊಸದಿಲ್ಲಿ,ಸೆ.4: ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯಲ್ಲಿ 19ರ ಹರೆಯದ ಬುಡಕಟ್ಟು ಯುವತಿಯ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಪ್ರಕರಣದಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ವರದಿಯೊಂದನ್ನು ತನಗೆ ಸಲ್ಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲು)ವು ಬುಧವಾರ ರಾಜ್ಯದ ಪೊಲೀಸರಿಗೆ ನಿರ್ದೇಶ ನೀಡಿದೆ. ಇನ್ನೊಂದು ಬುಡಕಟ್ಟು ಜನಾಂಗದ ವ್ಯಕ್ತಿಯೊಂದಿಗೆ ಸಂಬಂಧವಿಟ್ಟುಕೊಂಡಿದ್ದಕ್ಕಾಗಿ ಸಮುದಾಯದ ಸದಸ್ಯರು ಯುವತಿಯನ್ನು ಅರೆಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದರು.

ಶನಿವಾರ ಈ ಘಟನೆ ನಡೆದಿದ್ದು,ಗ್ರಾಮದಲ್ಲಿ ಅರೆಬೆತ್ತಲೆ ಯುವತಿಯ ಮೆರವಣಿಗೆ,ಆಕೆ ಕರುಣೆ ತೋರಿಸುವಂತೆ ಬೊಬ್ಬೆಯಿಡುತ್ತಿದ್ದರೆ ದೊಣ್ಣೆಗಳಿಂದ ಆಕೆಯನ್ನು ಥಳಿಸುತ್ತಿರುವುದನ್ನು ತೋರಿಸುವ ವೀಡಿಯೊ ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಘಟನೆಯನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರುವ ಆಯೋಗವು,ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿ ಮಧ್ಯಪ್ರದೇಶ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್‌ನ್ನು ಹೊರಡಿಸಿದೆ.

ಆಯೋಗದ ಪ್ರತಿನಿಧಿಯೋರ್ವರು ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ,ಯುವತಿಗೆ ರಕ್ಷಣೆ ಒದಗಿಸುವಂತೆ ಮತ್ತು ತ್ವರಿತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಆಯೋಗವು ಪ್ರಕರಣದ ಮೇಲೆ ನಿಕಟ ನಿಗಾಯಿರಿಸಿದೆ ಎಂದು ಎನ್‌ಸಿಡಬ್ಲು ಹೇಳಿಕೆಯಲ್ಲಿ ತಿಳಿಸಿದೆ.

ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದು,ಇತರ ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News