×
Ad

ಎನ್‌ಡಿಟಿವಿ ವಿರುದ್ಧ ‘ಸೆಬಿ’ ಆದೇಶ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

Update: 2019-09-05 22:23 IST

ಮುಂಬೈ,ಸೆ.5: ನ್ಯೂ ಡೆಲ್ಲಿ ಟೆಲಿವಿಶನ್ ಲಿ. (ಎನ್‌ಡಿಟಿವಿ) ವಿರುದ್ಧ ಭಾರತೀಯ ಭದ್ರತೆ ಮತ್ತು ವಿನಿಮಯ ಮಂಡಳಿ (ಸೆಬಿ) ಜಾರಿ ಮಾಡಿರುವ ಆದೇಶವನ್ನು ಬಾಂಬೆ ಉಚ್ಚ ನ್ಯಾಯಾಲಯ ಬುಧವಾರ ರದ್ದುಗೊಳಿಸಿದೆ.

ಭದ್ರತೆ ಒಪ್ಪಂದ (ನಿಯಂತ್ರಣ) ಕಾಯ್ದೆ, 1956ಅನ್ನು ಉಲ್ಲಂಘಿಸಿದ ಕಾರಣಕ್ಕೆ ಎನ್‌ಡಿಟಿವಿ ವಾಹಿನಿಯ ವಿರುದ್ಧ ‘ಸೆಬಿ’ ಕಾನೂನು ಕ್ರಮ ತೆಗೆದುಕೊಂಡ ಹಿನ್ನೆಲೆಯಲ್ಲಿ ಪರಿಹಾರ ಅರ್ಜಿಯನ್ನು ದಾಖಲಿಸಲು ನೀಡಿರುವ ಸಮಯವನ್ನು ವಿಸ್ತರಿಸಬೇಕೆಂದು ಕೋರಿ ವಾಹಿನಿ ಮಾಡಿದ ಮನವಿಯನ್ನು ಸೆಬಿ ತಿರಸ್ಕರಿಸಿ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರಾದ ಅಖಿಲ್ ಕುರೇಶಿ ಮತ್ತು ಎಸ್.ಜೆ ಕಾತಾವಾಲ ಅವರ ನ್ಯಾಯಪೀಠ, ಅವಧಿ ವಿಸ್ತರಣೆ ಕೋರಿ ಎನ್‌ಡಿಟಿವಿ ಸಲ್ಲಿಸಿರುವ ಅರ್ಜಿ ವಿವರಾತ್ಮಕ ಮತ್ತು ಸಮರ್ಥವಾಗಿದೆ ಎಂದು ತಿಳಿಸಿದೆ.

ಪರಿಹಾರ ಅರ್ಜಿಗಳನ್ನು ದಾಖಲಿಸಲು ಅವಧಿ ವಿಸ್ತರಣೆ ಮಾಡುವಂತೆ ಕೋರಿ ಎನ್‌ಡಿಟಿವಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ತಿರಸ್ಕರಿಸಿದ ‘ಸೆಬಿ’ ಆಗಸ್ಟ್ 23, 2017 ಮತ್ತು ಆಗಸ್ಟ್ 31,2017ರ ಆದೇಶಗಳನ್ನು ಪ್ರಶ್ನಿಸಿ ವಾಹಿನಿ 2018ರಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಫೆಬ್ರವರಿ 21, 2014ರಂದು ನೀಡಲಾದ ತೆರಿಗೆ ಮೌಲ್ಯಮಾಪನ ಆದೇಶದಲ್ಲಿ ಕಂಡುಬಂದಂತೆ 2009-10ರಲ್ಲಿ ಎನ್‌ಡಿಟಿವಿ ಸ್ವೀಕರಿಸಿದ್ದ 450 ಕೋಟಿ ರೂ. ಮೊತ್ತಕ್ಕೆ ತೆರಿಗೆ ಪಾವತಿಸಿಲ್ಲ. ಆಮೂಲಕ ಒಪ್ಪಂದದ 36ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ‘ಸೆಬಿ’ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಎನ್‌ಡಿಟಿವಿ ಪರ ವಾದಿಗಳು, “ನಾವು ಕಾನೂನು ಸಲಹೆಯನ್ನು ಪಡೆದಿದ್ದೆವು ಮತ್ತು ಒಪ್ಪಂದದ 36ನೇ ವಿಧಿಯಡಿ ತೆರಿಗೆ ವ್ಯತ್ಯಾಸದ ಬಗ್ಗೆ ತಿಳಿಸುವ ಅಗತ್ಯವಿಲ್ಲ ಎಂದು ಭಾವಿಸಿದ್ದೆವು” ಎಂದು ತಿಳಿಸಿದ್ದರು.

ಎನ್‌ಡಿಟಿವಿ ಪರ ವಾದಿಸಿದ ಫರಿಶ್ತೆ ಸೇತ್ನ ಮತ್ತು ಅಧಿರಾಜ್ ಮಲ್ಹೋತ್ರ, ‘ಸೆಬಿ’ ತಿಳಿಸಿರುವಂತೆ ಎನ್‌ಡಿಟಿವಿ ತೆರಿಗೆ ಪಾವತಿಯ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ. ಅರ್ಜಿ ಸಲ್ಲಿಸಲು ಸಮಯಾವಕಾಶ ಕೋರಿ ಕಕ್ಷಿದಾರರು ಸಲ್ಲಿಸಿರುವ ಮನವಿ ಸಂಪೂರ್ಣ ಮತ್ತು ಸಮರ್ಥವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News